ಕೇರಳ: ಜಗಳದ ನಡುವೆ ಆಂಬ್ಯುಲೆನ್ಸ್ ಗೆ ದಾರಿ ಮಾಡಿ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು
ಕಲ್ಲಿಕೋಟೆ: ಕೇರಳದ ಕ್ಯಾಲಿಕಟ್ ಜಿಲ್ಲೆಯಲ್ಲಿ ರಸ್ತೆ ಜಗಳದಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಂಡಾಯ ಕಾರ್ಯಕರ್ತರು, ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟು, ಮತ್ತೆ ಜಗಳದಲ್ಲಿ ತೊಡಗಿಕೊಂಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆದಿದೆ.
ಕಲ್ಲಿಕೋಟೆ ಜಿಲ್ಲೆಯ ಸ್ಥಳೀಯ ಸಹಕಾರಿ ಬ್ಯಾಂಕ್‌ನ ಚುನಾವಣೆ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಬಂಡಾಯ ಬಣದ ನಡುವಿನ ಉದ್ವಿಗ್ನತೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.
Today, INC workers & INC rebels (backed by CPIM) clashed on the main road near my home over a Cooperative Bank election.
— Siddharth (@DearthOfSid) November 16, 2024
Suddenly, an ambulance approaches; both sides immediately pause the fight, make way for it to pass—then go right back to fighting.
The real Kerala story pic.twitter.com/8Oqss8q2lV
ಚುನಾವಣಾ ಫಲಿತಾಂಶದ ಬಳಿಕ ಜಗಳ ತಾರಕಕ್ಕೇರಿದ್ದು, ಮಾಜಿ ಕಾಂಗ್ರೆಸ್ ಸದಸ್ಯರನ್ನು ಒಳಗೊಂಡಿರುವ ಬಂಡಾಯ ಗುಂಪು ಮತ್ತು CPI(M) ಬೆಂಬಲದೊಂಡಿಗೆ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ನಿಯಂತ್ರಣವನ್ನು ಗೆದ್ದುಕೊಂಡಿದೆ. ಮಂಡಳಿಯು ಕಳೆದ 61 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇದು ಪಾರಂಪರಿಕ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ನಡು ರಸ್ತೆಯಲ್ಲಿ ಇತ್ತಂಡಗಳ ನಡುವೆ ಹೊಯ್-ಕೈ ನಡೆಯುತ್ತಿರುವಂತೆ ಆಂಬ್ಯುಲೆನ್ಸ್ ಒಂದು ಹಾದು ಬಂದಿದೆ. ಜಗಳದಲ್ಲಿ ತೊಡಗಿದ್ದ ಕಾರ್ಯಕರ್ತರು ತಕ್ಷಣ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದು, ಆಂಬ್ಯುಲೆನ್ಸ್ ಹೋಗುತ್ತಿದ್ದಂತೆ ಮತ್ತೆ ಜಗಳ ಶುರು ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಗಳದ ನಡುವೆಯೂ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿರುವ ಬಗ್ಗೆ ವಿನೋದಕರ ಕಾಮೆಂಟ್ ಗಳನ್ನು ಜನರು ಮಾಡಿದ್ದಾರೆ.