ಲ್ಯಾಟರಲ್ ಎಂಟ್ರಿ ದಲಿತರು, ಒಬಿಸಿಗಳು, ಆದಿವಾಸಿಗಳ ಮೇಲಿನ ದಾಳಿ : ರಾಹುಲ್ ಗಾಂಧಿ

Update: 2024-08-19 16:17 GMT

Photo : PTI

ಹೊಸದಿಲ್ಲಿ : ಲ್ಯಾಟರಲ್ ಎಂಟ್ರಿ ದಲಿತರು, ಹಿಂದುಳಿದ ವರ್ಗದವರು ಹಾಗೂ ಆದಿವಾಸಿಗಳ ಮೇಲಿನ ದಾಳಿ ಎಂದು ಕರೆದಿರುವ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಹುಜನರಿಂದ ಮೀಸಲಾತಿಯನ್ನು ಕಿತ್ತುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸೋಮವಾರ ಹೇಳಿದ್ದಾರೆ.

ಲ್ಯಾಟರಲ್ ಎಂಟ್ರಿ ಮೂಲಕ 45 ಜಂಟಿ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಉಪ ಕಾರ್ಯದರ್ಶಿಗಳ ನೇಮಕಾತಿಗೆ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ)ಶನಿವಾರ ಅಧಿಸೂಚನೆ ಹೊರಡಿಸಿದ ಬಳಿಕ ಕಾಂಗ್ರೆಸ್ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಲ್ಯಾಟರಲ್ ಎಂಟ್ರಿ ದಲಿತರು, ಹಿಂದುಳಿದ ವರ್ಗದವರು ಹಾಗೂ ಆದಿವಾಸಿಗಳ ಮೇಲಿನ ದಾಳಿ ಎಂದು ರಾಹುಲ್ ಗಾಂಧಿ ತನ್ನ ‘ಎಕ್ಸ್’ನ ಪೋಸ್ಟ್ ನಲ್ಲಿ ಹೇಳಿದ್ದಾರೆ. ಬಿಜೆಪಿಯ ರಾಮರಾಜ್ಯದ ತಿರುಚಿತ ಆವೃತ್ತಿಯು ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಲ್ಯಾಟರಲ್ ಎಂಟ್ರಿ ಪರಿಕಲ್ಪನೆಯನ್ನು ಮೊದಲಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪರಿಚಯಿಸಲಾಗಿತ್ತು. ಸರಕಾರ 2005ರಲ್ಲಿ ಸ್ಥಾಪಿಸಿದ ಎರಡನೇ ಆಡಳಿತಾತ್ಮಕ ಸುಧಾರಣಾ ಆಯೋಗ ಈ ಪರಿಕಲ್ಪನೆಗೆ ಬೆಂಬಲ ವ್ಯಕ್ತಪಡಿಸಿತ್ತು ಎಂದು ಸರಕಾರದ ಮೂಲಗಳು ತಿಳಿಸಿದೆ.

ಲ್ಯಾಟರಲ್ ಎಂಟ್ರಿ ವ್ಯವಸ್ಥೆ ಕುರಿತು ಕಾಂಗ್ರೆಸ್ ನ ಟೀಕೆ ಬೂಟಾಟಿಕೆಯನ್ನು ತೋರಿಸುತ್ತಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿಗೊಳಿಸಿದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಬಿಜೆಪಿ ನೇತೃತ್ವದ ಎನ್‌ ಡಿ ಎ ಸರಕಾರ ಪಾರದರ್ಶಕ ವಿಧಾನವನ್ನು ರೂಪಿಸಿದೆ ಎಂದು ಅವರು ಪ್ರತಿಪಾದಿಸಿದರು.

ರವಿವಾರ ‘ಎಕ್ಸ್’ನ ಹಿಂದಿ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ, ಲ್ಯಾಟರಲ್ ಎಂಟ್ರಿ ಮೂಲಕ ಸರಕಾರಿ ಅಧಿಕಾರಿಗಳನ್ನು ನೇಮಕ ಮಾಡುವ ಸರಕಾರದ ನಡೆಯನ್ನು ದೇಶ ವಿರೋಧಿ ಹೆಜ್ಜೆ ಎಂದು ವ್ಯಾಖ್ಯಾನಿಸಿದ್ದರು. ಇಂತಹ ಕ್ರಮಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬಹಿರಂಗವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

‘‘ಕೇಂದ್ರ ಸರಕಾರದ ವಿವಿಧ ಸಚಿವಾಲಯದ ಪ್ರಮುಖ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬಹಿರಂಗಿವಾಗಿ ಕಸಿದುಕೊಳ್ಳಲಾಗುತ್ತಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಆಡಳಿತಾತ್ಮಕ ವಿನ್ಯಾಸ ಹಾಗೂ ಸಾಮಾಜಿಕ ನ್ಯಾಯಕ್ಕೆ ಹಾನಿ ಉಂಟು ಮಾಡುವ ಈ ರಾಷ್ಟ್ರ ವಿರೋಧಿ ಹೆಜ್ಜೆಯನ್ನು ಇಂಡಿಯಾ ಮೈತ್ರಿಕೂಟ ತೀವ್ರವಾಗಿ ವಿರೋಧಿಸುತ್ತದೆ. ಐಎಎಸ್ನ ಖಾಸಗೀಕರಣ ಮೀಸಲಾತಿ ಕೊನೆಗೊಳಿಸಲು ಮೋದಿ ಗ್ಯಾರಂಟಿ ಎಂದು ರಾಹುಲ್ ಗಾಂಧಿ ತಿಳಿಸಿದ್ದರು.  

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News