ಲೋಕಸಭಾ ಚುನಾವಣೆ | ಬಿಜೆಪಿ-ಅಕಾಲಿ ದಳ ನಡುವೆ ಮೈತ್ರಿ ಚರ್ಚೆ : ಅಮಿತ್ ಶಾ

Update: 2024-02-11 16:40 GMT

ಅಮಿತ್ ಶಾ | Photo: PTI 

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಬಿಜೆಪಿಯು ಶಿರೋಮಣಿ ಅಕಾಲಿ ದಳದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಶನಿವಾರ ಇಲ್ಲಿ ಟೈಮ್ಸ್ ಜಾಗತಿಕ ಉದ್ಯಮ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಯಾವುದೂ ಇನ್ನೂ ಅಂತಿಮಗೊಂಡಿಲ್ಲ,ಉಭಯ ಪಕ್ಷಗಳು ಚರ್ಚೆಗಳನ್ನು ನಡೆಸುತ್ತಿವೆ ಎಂದು ತಿಳಿಸಿದರು.

‘ನಮ್ಮ ಮೈತ್ರಿಕೂಟ ಬೆಳೆಯಬೇಕು ಎಂದು ನಾವು ಯಾವಾಗಲೂ ಬಯಸಿದ್ದೇವೆ ಮತ್ತು ನೂತನ ಮಿತ್ರಪಕ್ಷಗಳನ್ನು ನಾವು ಯಾವಾಗಲೂ ಸ್ವಾಗತಿಸುತ್ತೇವೆ. ಜನಸಂಘದ ದಿನಗಳಿಂದಲೂ ನಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಚ್ಛೆಯುಳ್ಳವರು ನಮ್ಮೊಂದಿಗೆ ಸೇರಬಹುದು ’ ಎಂದರು.

ಶಿರೋಮಣಿ ಅಕಾಲಿ ದಳವು 1996ರಿಂದಲೂ ಎನ್ ಡಿ ಎ ಭಾಗವಾಗಿತ್ತು,ಆದರೆ ಬಿಜೆಪಿ ಸರಕಾರವು ನೂತನ ಕೃಷಿ ಕಾಯ್ದೆಗಳನ್ನು ತಂದ ಬಳಿಕ ಅದು ಮೈತ್ರಿಕೂಟದಿಂದ ಹೊರಬಂದಿತ್ತು. ಈ ಕೃಷಿ ಕಾಯ್ದೆಗಳು ಈಗ ರದ್ದುಗೊಂಡಿವೆ.

2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳವು ಬಿಎಸ್ಪಿ ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಿತ್ತು. ಆದರೆ 117 ಸ್ಥಾನಗಳ ಪೈಕಿ ಕೇವಲ ಮೂರನ್ನು ಗೆಲ್ಲಲು ಅದಕ್ಕೆ ಸಾಧ್ಯವಾಗಿತ್ತು. ಪಂಜಾಬ್ 13 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News