NDA ಸರಕಾರದ ಮೂರನೆಯ ಅವಧಿಯು ʼಕೆಲಕಾಲದ ಅತಿಥಿʼಯಾಗಿರಲಿದೆ: ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಸ್ಥ
ಶ್ರೀನಗರ : ಸರ್ವಾಧಿಕಾರಿಗಳು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಸಾಧ್ಯವಿಲ್ಲದೆ ಇರುವುದರಿಂದ ಬಿಜೆಪಿ ನೇತೃತ್ವದ NDA ಸರಕಾರದ ಮೂರನೆಯ ಅವಧಿ ಕೆಲಕಾಲದ ಅತಿಥಿ ಮಾತ್ರವಾಗಿರಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಭವಿಷ್ಯ ನುಡಿದಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ತಕ್ಷಣವೇ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ತರಬೇಕು ಎಂಬ ತಮ್ಮ ಪಕ್ಷದ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ವೇಳೆ NDA ಸರಕಾರವೇನಾದರೂ ಮೂರನೆಯ ಅವಧಿಗೆ ಅಧಿಕಾರಕ್ಕೆ ಬಂದರೆ, ಸರ್ವಾಧಿಕಾರಿಗಳಿಗೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಸಾಧ್ಯವಿಲ್ಲದೆ ಇರುವುದರಿಂದ ಅದು ಕೆಲಕಾಲ ಅತಿಥಿ ಮಾತ್ರವಾಗಿರಲಿದೆ ಎಂಬುದನ್ನು ಬರೆದಿಟ್ಟುಕೊಳ್ಳಿ. ‘ಎಲ್ಲರೊಂದಿಗೆ, ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ’ ಎಂಬ ಬಿಜೆಪಿ ಘೋಷಣೆಯು ಸುಳ್ಳಾಗಿದ್ದು, ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳಾದ ಈಡಿ, ಸಿಬಿಐ ಹಾಗೂ ಪೊಲೀಸರನ್ನು ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಹಾಕಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಈ ಮಾತಿಗೆ ಜ್ವಲಂತ ನಿದರ್ಶನವಾಗಿದ್ದಾರೆ” ಎಂದು ಹೇಳಿದ್ದಾರೆ.
“ಸರ್ವಾಧಿಕಾರಿಗಳು ಸರಕಾರವನ್ನು ದೀರ್ಘಕಾಲ ನಡೆಸಲು ಸಾಧ್ಯವಿಲ್ಲ. ಯಾರಾದರೂ ಸರಕಾರ ನಡೆಸಿ, ಆರ್ಥಿಕ ಸಮೃದ್ಧತೆ ಹಾಗೂ ಸೇನೆಯನ್ನು ಬಲಪಡಿಸುವುದಿದ್ದರೆ ಸಮಾಜದ ಎಲ್ಲ ವರ್ಗಗಳನ್ನೂ ತನ್ನೊಂದಿಗೆ ಕರೆದೊಯ್ಯುವುದನ್ನು ನಿಜಾರ್ಥದಲ್ಲಿ ನಂಬಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ” ಎಂದು ವಾನಿ ಪ್ರತಿಪಾದಿಸಿದ್ದಾರೆ.