ಲೋಕಸಭೆಯ ನೀತಿ ಸಮಿತಿಯಿಂದ ನಾಳೆ ಮಹುವಾ ಮೊಯಿತ್ರಾ ಕುರಿತು ವರದಿ ಮಂಡನೆ?
ಹೊಸದಿಲ್ಲಿ: ಲೋಕಸಭೆಯ ನೀತಿ ಸಮಿತಿಯು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕುರಿತು ತನ್ನ ವರದಿಯನ್ನು ಮಂಗಳವಾರ ಸದನದಲ್ಲಿ ಮಂಡಿಸಲು ಸಜ್ಜಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
‘ಪ್ರಶ್ನೆಗಳಿಗಾಗಿ ಲಂಚ ’ ಪ್ರಕರಣದಲ್ಲಿ ಮೊಯಿತ್ರಾ ಅವರ ಉಚ್ಚಾಟನೆಗೆ ಶಿಫಾರಸು ಮಾಡಿರುವ ನೀತಿ ಸಮಿತಿಯ ವರದಿಯನ್ನು ಸೋಮವಾರದ ಅಜೆಂಡಾದಲ್ಲಿ ಪಟ್ಟಿ ಮಾಡಲಾಗಿತ್ತಾದರೂ ಅದನ್ನು ಮಂಡಿಸದ್ದಕ್ಕೆ ಪ್ರತಿಪಕ್ಷ ಸಂಸದರು ಅಚ್ಚರಿಯನ್ನು ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿಯ ಬಳಿಕ ಮಂಡನೆಗೆ ನಿಗದಿಯಾಗಿದ್ದ ವರದಿಯು ಅಪರಾಹ್ನ ಒಂದು ಗಂಟೆಯ ಸುಮಾರಿಗೆ ಭೋಜನ ವಿರಾಮಕ್ಕಾಗಿ ಸದನವು ಮುಂದೂಡಲ್ಪಟ್ಟರೂ ಮಂಡನೆಯಾಗಿರಲಿಲ್ಲ.
ಸದನವು ಮರುಸಮಾವೇಶಗೊಂಡಾಗ ಸಚಿವರು ಕ್ರಿಮಿನಲ್ ಕಾಯ್ದೆಗಳನ್ನು ಬದಲಿಸುವ ಕುರಿತು ದಾಖಲೆಗಳು ಮತ್ತು ಮೂರು ವರದಿಗಳನ್ನು ಮಂಡಿಸಿದರು. ಆದರೆ ಮೊಯಿತ್ರಾರ ಉಚ್ಚಾಟನೆ ಕುರಿತ ವರದಿಯನ್ನು ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು. ಈ ಬಗ್ಗೆ ಮೊಯಿತ್ರಾ ಮತ್ತು ಟಿಎಂಸಿ ನಾಯಕ ಸುದೀಪ ಬಂದೋಪಾಧ್ಯಾಯ ಅವರು ಅಧ್ಯಕ್ಷರನ್ನು ಪ್ರಶ್ನಿಸಿದ್ದು,ಕಾಂಗ್ರೆಸ್ನ ಕೆ.ಸುರೇಶ ಮತ್ತು ಆರ್ಎಸ್ಪಿಯ ಎನ್.ಕೆ.ರಾಮಚಂದ್ರನ್ ಅವರ ಕಳವಳಗಳನ್ನು ಪ್ರತಿಧ್ವನಿಸಿದರು.
ಬಳಿಕ ವರದಿಯ ಅನುಪಸ್ಥಿತಿಯನ್ನು ಒಪ್ಪಿಕೊಂಡ ಕಾಂಗ್ರೆಸ್ ನಾಯಕ ಅಧೀರ ರಂಜನ್ ಚೌಧುರಿಯವರು, ವರದಿಯನ್ನು ಸೋಮವಾರ ಸದನದಲ್ಲಿ ಮಂಡಿಸದಿರಲು ನೀತಿ ಸಮಿತಿಯು ಸಕಾರಣಗಳನ್ನು ಹೊಂದಿರಬಹುದು ಎಂದು ಹೇಳಿದರು. ವರದಿಯು ಅಂತಿಮವಾಗಿ ಸದನದಲ್ಲಿ ಮಂಡನೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ವರದಿಯನ್ನು ತಡೆಹಿಡಿಯಲು ಅವರಿಗೆ ಅನಿವಾರ್ಯ ಕಾರಣವಿದ್ದಿರಬೇಕು ಎಂದು ಒತ್ತಿ ಹೇಳಿದರು.
ವರದಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಮೊಯಿತ್ರಾ ಅದು ಅಧಿಕೃತವಾಗಿ ಮಂಡನೆಯಾಗುವವರೆಗೆ ತನ್ನ ಪ್ರತಿಕ್ರಿಯೆಗಳನ್ನು ಕಾಯ್ದಿರಿಸುವುದಾಗಿ ಉತ್ತರಿಸಿದರು.