ರಾಜ್ಯದ ಬೊಕ್ಕಸದಿಂದಲೇ ಶೈಕ್ಷಣಿಕ ನಿಧಿ ಬಿಡುಗಡೆಗೆ ಸ್ಟಾಲಿನ್ ಸರಕಾರ ನಿರ್ಧಾರ
ಎಂ.ಕೆ. ಸ್ಟಾಲಿನ್ | PC : PTI
ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ ಇದ್ದುದಕ್ಕಾಗಿ ಸಮಗ್ರ ಶಿಕ್ಷಣ ಯೋಜನೆಗಾಗಿನ 2152 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರವು ತಡೆಹಿಡಿದಿರುವುದಕ್ಕೆ ಪರಿಹಾರವಾಗಿ ರಾಜ್ಯ ಸರಕಾರವು ತನ್ನ ಬೊಕ್ಕಸದಿಂದಲೇ ನಿಧಿಯನ್ನು ಬಿಡುಗಡೆಗೊಳಿಸಲಿದೆಯೆಂದು ತಮಿಳುನಾಡು ವಿತ್ತ ಸಚಿವ ತಂಗಂ ತೆನ್ನರಸು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಒಳಿತನ್ನು ಗಮನದಲ್ಲಿರಿಸಿಕೊಂಡು, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣವು ಅಬಾಧಿತವಾಗಿ ನಡೆಯುವಂತೆ ನೋಡಿಕೊಳ್ಳಲು ರಾಜ್ಯ ಸರಕಾರವು ತನ್ನದೇ ಸಂಪನ್ಮೂಲಗಳಿಂದ ಶಿಕ್ಷಕರ ವೇತನವೂ ಸೇರಿದಂತೆ ನಿಧಿಗಳನ್ನು ಬಿಡುಗಡೆಗೊಳಿಸಲಿದೆಯೆಂದು ಅವರು ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಚರ್ಚೆಯ ಸಂದರ್ಭ ಹೇಳಿದ್ದಾರೆ.
2018ರಲ್ಲಿ ಜಾರಿಗೊಳಿಸಲಾದ ಸಮಗ್ರ ಶಿಕ್ಷಾ ಯೋಜನೆಯ ಮೂಲಕ ಕೇಂದ್ರ ಸರಕಾರವು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣಕ್ಕಾಗಿ ನಿಧಿಗಳನ್ನು ಒದಗಿಸುತ್ತಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸದೆ ಇದ್ದುದಕ್ಕಾಗಿ ತಮಿಳುನಾಡಿಗೆ ಈ ಮೊತ್ತವನ್ನು ಬಿಡುಗಡೆಗೊಳಿಸುವುದಿಲ್ಲವೆಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ತಿಳಿಸಿದ್ದರು.