ಈಡಿಯಿಂದ ಕಾನೂನು ಕ್ರಮ ಎದುರಿಸಲು ಸಿದ್ಧ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ
Photo: X/@V_Senthilbalaji
ಚೆನ್ನೈ: 1,000 ಕೋಟಿ ರೂ. ಮೌಲ್ಯದ ಅಬಕಾರಿ ಹಗರಣ ನಡೆದಿದೆ ಎಂಬ ಜಾರಿ ನಿರ್ದೇಶನಾಲಯ(ಈಡಿ)ದ ಆರೋಪಗಳನ್ನು ಶುಕ್ರವಾರ ತಳ್ಳಿ ಹಾಕಿದ ತಮಿಳುನಾಡು ಇಂಧನ ಮತ್ತು ಅಬಕಾರಿ ಸಚಿವ ಸೆಂಥಿಲ್ ಬಾಲಾಜಿ, ಭಾಷಾ ವಿವಾದ ಹಾಗೂ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ರಾಜಕೀಯವಾಗಿ ಎದುರಿಸಲಾಗದ ಕೇಂದ್ರ ಸರಕಾರ ಈ ಹತಾಶ ಪ್ರಯತ್ನಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಜಾರಿ ನಿರ್ದೇಶನಾಲಯ(ಈಡಿ) ತಮ್ಮ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ಸಚಿವ ಬಾಲಾಜಿ ಸೆಂಥಿಲ್, ಜಾರಿ ನಿರ್ದೇಶನಾಲಯ(ಈಡಿ)ವು ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿರುವುದರಿಂದ, ಅದರ ವಿರುದ್ಧ ನ್ಯಾಯಾಂಗದ ಮೊರೆ ಹೋಗಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ ಎಂದೂ ತಿಳಿಸಿದರು.
ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಐವರು ಜಿಲ್ಲಾಧಿಕಾರಿಗಳ ವಿರುದ್ಧ ತನಿಖೆ ನಡೆಸದಂತೆ ಜಾರಿ ನಿರ್ದೇಶನಾಲಯ(ಈಡಿ)ದ ವಿರುದ್ಧ ಕಳೆದ ವರ್ಷ ತಮಿಳುನಾಡು ಸರಕಾರ ತಡೆಯಾಜ್ಞೆ ತಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಈ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಲು ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ಯಾವುದೇ ಅಧಿಕಾರ ವ್ಯಾಪ್ತಿಯಿಲ್ಲ. ಆದರೆ, ಅದು ತನ್ನ ತನಿಖೆಯನ್ನು ಮುಂದುವರಿಸಲು ಅಡ್ಡಿಯಿಲ್ಲ ಎಂದು ತೀರ್ಪು ನೀಡಿತ್ತು.
“ಇದು ಸಾಮಾನ್ಯೀಕರಿಸಿದ ಆರೋಪ. TASMAC ರಾಜ್ಯ ಸರಕಾರ ಮಾಲಕತ್ವದ ಸಂಸ್ಥೆಯಾಗಿದ್ದು, ಸರಕಾರವು ಅಸ್ತಿತ್ವದಲ್ಲಿರುವ ನಿಯಮಾವಳಿಗಳಡಿ ಕಾರ್ಯನಿರ್ವಹಿಸುತ್ತಿರುವುದರಿಂದ, ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದೆ. ಟೆಂಡರ್ ಪ್ರಕ್ರಿಯೆಗಳು ಪಾರದರ್ಶಕವಾಗಿರುವುದರಿಂದ, ಅವ್ಯವಹಾರಗಳಿಗೆ ಯಾವುದೇ ಅವಕಾಶವಿಲ್ಲ ಹಾಗೂ ಖರೀದಿಯಲ್ಲಿ ಯಾರೊಬ್ಬರಿಗೂ ರಿಯಾಯಿತಿ ತೋರಿಸಿಲ್ಲ” ಎಂದು ಸಚಿವ ಸೆಂಥಿಲ್ ಬಾಲಾಜಿ ಸಮರ್ಥಿಸಿಕೊಂಡರು.
“ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ(ಈಡಿ) ಬಿಡುಗಡೆಗೊಳಿಸಿರುವ ಪ್ರಕಟಣೆಯು ರಾಜ್ಯ ಬಜೆಟ್ ಅನ್ನು ಮಂಕಾಗಿಸಲು ನಡೆಸಿರುವ ಕುಚೇಷ್ಟೆಯಾಗಿದೆ. ಕೆಲ ದಿನಗಳ ಹಿಂದೆ ನಾಯಕರೊಬ್ಬರು TASMAC ಹಗರಣದ ಮೌಲ್ಯ 1,000 ಕೋಟಿ ರೂ. ಎಂದು ಆಪಾದಿಸಿದ್ದರು ಹಾಗೂ ಜಾರಿ ನಿರ್ದೇಶನಾಲಯ(ಈಡಿ) ಕೂಡಾ ಆ ವ್ಯಕ್ತಿ ಉಲ್ಲೇಖಿಸಿರುವ ಅಂಕಿ-ಸಂಖ್ಯೆಯನ್ನಷ್ಟೇ ಪುನರಾವರ್ತಿಸಿದೆ. ಹಾಗಾದರೆ, ಜಾರಿ ನಿರ್ದೇಶನಾಲಯ(ಈಡಿ) ಯಾರಿಗಾಗಿ ಕೆಲಸ ಮಾಡುತ್ತಿದೆ?”, ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಹೆಸರನ್ನು ಉಲ್ಲೇಖಿಸದೆ ಅವರು ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮುನ್ನ, ಮದ್ಯ ಮಾರಾಟದ ಮೇಲೆ ಏಕಸ್ವಾಮ್ಯ ಹೊಂದಿರುವ ರಾಜ್ಯ ಸರಕಾರ ಮಾಲಕತ್ವದ ತಮಿಳುನಾಡು ರಾಜ್ಯ ಮಾರುಕಟ್ಟೆ ಕಂಪನಿ ಲಿಮಿಟೆಡ್ ನಿಂದ ಹೆಚ್ಚುವರಿ ಮದ್ಯ ಸರಬರಾಜು ಆದೇಶ ಪಡೆಯಲು, ಮದ್ಯ ಕಾರ್ಖಾನೆಗಳು 1,000 ಕೋಟಿ ರೂ.ಗೂ ಹೆಚ್ಚು ಲೆಕ್ಕವಿಡದ ನಗದನ್ನು ಕಿಕ್ ಬ್ಯಾಕ್ ಆಗಿ ತಮ್ಮ ಖಾತೆಗಳಿಂದ ವರ್ಗಾಯಿಸಿರುವ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಗುರುವಾರ ಜಾರಿ ನಿರ್ದೇಶನಾಲಯ(ಈಡಿ) ಹೇಳಿಕೊಂಡಿತ್ತು.