ತುಳಸಿ ಗಬ್ಬಾರ್ಡ್ ಜೊತೆ ಭಾರತದ ಮಾತುಕತೆ | ಖಾಲಿಸ್ತಾನಿ ಭಯೋತ್ಪಾದನೆ, ಎಸ್‌ಎಫ್‌ಜೆ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಜನಾಥ ಸಿಂಗ್ , ತುಳಸಿ ಗಬ್ಬಾರ್ಡ್ | PC : PTI
ಹೊಸದಿಲ್ಲಿ: ಯುಎಸ್ ನೆಲದಿಂದ ಕಾರ್ಯಾಚರಿಸುತ್ತಿರುವ ನಿಷೇಧಿತ ಖಾಲಿಸ್ತಾನಿ ಭಯೋತ್ಪಾದಕ ಗುಂಪು ಸಿಖ್ಸ್ ಫಾರ್ ಜಸ್ಟೀಸ್(ಎಸ್‌ಎಫ್‌ಜೆ) ಮತ್ತು ಅದರ ಸಂಸ್ಥಾಪಕ ಗುರ್ಪತ್ವಂತ್ ಸಿಂಗ್ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಭಾರತವು ಸೋಮವಾರ ಅಮೆರಿಕವನ್ನು ಆಗ್ರಹಿಸಿದೆ. ಅಮೆರಿಕದಲ್ಲಿ ನೆಲೆಸಿರುವ ವಕೀಲ ಸಿಂಗ್ ಎನ್‌ಐಎ ದಾಖಲಿಸಿರುವ ಎಂಟು ಪ್ರಕರಣಗಳು ಸೇರಿದಂತೆ 104 ಕ್ರಿಮಿನಲ್ ಪ್ರಕರಣಗಳನ್ನು ಭಾರತದಲ್ಲಿ ಎದುರಿಸುತ್ತಿದ್ದಾನೆ.
ಎಸ್‌ಎಫ್‌ಜೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಬೆದರಿಕೆಗಳು ಸೇರಿದಂತೆ ಭಾರತ ವಿರೋಧಿ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದೆ.
ಇಂಡೋ-ಪೆಸಿಫಿಕ್‌ನ ಬಹುರಾಷ್ಟ್ರಗಳ ಪ್ರವಾಸದ ಭಾಗವಾಗಿ ಭಾರತದಲ್ಲಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌ರನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಭೇಟಿಯಾಗಿ ರಕ್ಷಣಾ ಸಹಕಾರ ಮತ್ತು ಗುಪ್ತಚರ ಮಾಹಿತಿ ಹಂಚಿಕೆಯ ಬಗ್ಗೆ ಚರ್ಚಿಸಿದರು.
‘ರಕ್ಷಣೆ ಮತ್ತು ಮಾಹಿತಿ ಹಂಚಿಕೆ ಸೇರಿದಂತೆ ಭಾರತ-ಅಮೆರಿಕ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸಲು ವ್ಯಾಪಕ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ ’ ಎಂದು ಸಿಂಗ್ ಗಬ್ಬಾರ್ಡ್ ಭೇಟಿಯ ಬಳಿಕ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಗಬ್ಬಾರ್ಡ್ ಈಗಾಗಲೇ ದೋವಲ್ ಅವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ನಡುವೆ ಗುಪ್ತಚರ ಮಾಹಿತಿ ಹಂಚಿಕೆ ವ್ಯವಸ್ಥೆಯನ್ನು ಬಲಗೊಳಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದ್ದು, ಮಂಗಳವಾರ ರೈಸಿನಾ ಸಂವಾದವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರೈಸಿನಾ ಸಂವಾದವು ಭೌಗೋಳಿಕ ರಾಜಕೀಯ ಮತ್ತು ಭೌಗೋಳಿಕ ಅರ್ಥಶಾಸ್ತ್ರ ಕುರಿತು ಭಾರತವು 2016ರಿಂದ ಆಯೋಜಿಸುತ್ತಿರುವ ಬಹುರಾಷ್ಟ್ರೀಯ ವೇದಿಕೆಯಾಗಿದೆ.
ದೋವಲ್ ಅವರು ಗಬ್ಬಾರ್ಡ್ ಜೊತೆ ಖಾಲಿಸ್ತಾನಿ ಭಯೋತ್ಪಾದನೆ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ ಮತ್ತು ನಿರ್ದಿಷ್ಟವಾಗಿ ಅಮೆರಿಕ ನೆಲದಿಂದ ಕಾರ್ಯ ನಿರ್ವಹಿಸುತ್ತಿರುವ ಭಾರತ ವಿರೋಧಿ ಶಕ್ತಿಗಳ ಕುರಿತು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.