ಮಧ್ಯಪ್ರದೇಶ : ವಿಧಾನಸಭೆಯ ಶೇ.39ರಷ್ಟು ಶಾಸಕರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು!

Update: 2023-12-07 15:59 GMT

ಸಾಂದರ್ಭಿಕ ಚಿತ್ರ. | Photo: PTI 

ಭೋಪಾಲ್: ಮಧ್ಯಪ್ರದೇಶದ ನೂತನ ವಿಧಾನಸಭೆಗೆ ಆಯ್ಕೆಯಾದ ಶೇ.39ರಷ್ಟು ಶಾಸಕರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆ ಸಂದರ್ಭ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ಅವರು ತಿಳಿಸಿದ್ದರು. 230 ಸದಸ್ಯ ಬಲದ ಮಧ್ಯಪ್ರದೇಶದ ವಿಧಾನಸಭೆಯಲ್ಲಿ 90 ಶಾಸಕರು ಕ್ರಿವಿನಲ್ ಪ್ರಕರಣಗಳಲ್ಲಿ ಆರೋಪಿಗಳೆಂದು ಪರಿಗಣಿಸಲಾಗಿದೆ. ಆದರೆ 2018ರ ವಿಧಾನಸಭಾ ಚುನಾಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಶೇ.41ರಷ್ಟು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದವರಿದ್ದರು. ಈ ಬಾರಿ ಗಣನೀಯ ಇಳಿಕೆಯಾಗಿದೆ.

ಮಧ್ಯಪ್ರದೇಶದ ನೂತನ ವಿಧಾನಸಭೆಯ ಶೇ.34ರಷ್ಟು ಶಾಸಕರು ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅಂತಹವರ ಸಂಖ್ಯೆ ಶೇ.47ರಷ್ಟಿತ್ತು. ಶಿವಪುರಿ ಜಿಲ್ಲೆಯ ಪಿಚ್ಚೋರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರೀತಂ ಲೋಧಿ, ಕೊಲೆ ಆರೋಪ ಎದುರಿಸುತ್ತಿರುವ ಏಕೈಕ ಶಾಸಕರಾಗಿದ್ದರೆ, ಇತರ ಐವರು ಶಾಸಕರು ಕೊಲೆಯತ್ನದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮೂವರು ಚುನಾಯಿತ ಅಭ್ಯರ್ಥಿಗಳು ತಾವು ಮಹಿಳೆಯರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಮಧ್ಯಪ್ರದೇಶದ 163 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪಕ್ಷದ ಭರ್ಜರಿ ಬಹುಮತ ಪಡೆದಿದೆ. ಆದರೆ ಆ ಪಕ್ಷದ 51 ಮಂದಿ ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ 16 ಮಂದಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 66 ಕ್ಷೇತ್ರಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಪಕ್ಷದ 38 ಶಾಸಕರು ಕ್ರಿಮಿನಲ್ ಪ್ರಕರಣಗಳಲ್ಲಿ ಒಳಗೊಂಡಿದ್ದು, ಅವುಗಳಲ್ಲಿ 18 ಮಂದಿ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಭಾರತ ಆದಿವಾಸಿ ಪಕ್ಷದ ಏಕೈಕ ವಿಜೇತ ಅಭ್ಯರ್ಥಿ ಕೂಡಾ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಪ್ರಜಾತಾಂತ್ರಿಕ ಸುಧಾರಣೆಗಳ ಸಂಘ (ಎಡಿಆರ್) , ಇತ್ತೀಚೆಗೆ ಪ್ರಕಟಿಸಿದ ತನ್ನ ವರದಿಯಲ್ಲಿ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.

ಚಿಂದ್ವಾರಾ ಕ್ಷೇತ್ರದಿಂದ ಆಯ್ಕೆಯಾದ ಮಧ್ಯಪ್ರದೇಶ ಕಾಂಗ್ರೆಸ್ ವರಿಷ್ಠ ಕಮಲನಾಥ್ ಅವರು ಭೋಪಾಲ್ ಹಾಗೂ ಇಂದೋರ್ ನಲ್ಲಿ ಫೋರ್ಜರಿ ಹಾಗೂ ವಂಚನೆಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ ಎರಡೂ ಪ್ರಕರಣಗಳಲ್ಲಿ ಅವರ ವಿರುದ್ಧ ದೋಷಾರೋಪಗಳನ್ನು ನ್ಯಾಯಾಲಯವು ಪಟ್ಟಿಮಾಡಿಲ್ಲ.

ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 5 ವರ್ಷ ಅಥವಾ ಅದಕ್ಕಿಂತ ಅಧಿಕ ಅವಧಿಯ ಗರಿಷ್ಠ ಶಿಕ್ಷೆಗೆ ಒಳಗಾಗುವಂತಹ ಅಪರಾಧಗಳು, ಜಾಮೀನುರಹಿತ ಅಪರಾಧಗಳು, ಚುನಾವಣಾ ಅಪರಾಧಗಳು, ಮಹಿಳೆಯ ವಿರುದ್ದದ ಅಪರಾಧಗಳು ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುವ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News