ಮಹಾರಾಷ್ಟ್ರ | ಸಚಿವರ ಕಾರು ಚಾಲಕ ಹಾರನ್ ಹಾಕಿದ್ದಕ್ಕೆ ಘರ್ಷಣೆ; ಕರ್ಫ್ಯೂ ಜಾರಿ

Update: 2025-01-01 11:07 GMT

ಸಾಂದರ್ಭಿಕ ಚಿತ್ರ | PC : freepik.com

 

ಮುಂಬೈ: ಸಚಿವರೊಬ್ಬರ ಕಾರು ಚಾಲಕ ಮತ್ತು ಸ್ಥಳೀಯರ ಗುಂಪಿನ ನಡುವೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ಉಂಟಾಗಿ ಕರ್ಫ್ಯೂ ವಿಧಿಸಿರುವ ಘಟನೆ ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲ್ತಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದ ಕಾರಣ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಲ್ತಿ ಗ್ರಾಮದ ಕಸಾಯಿವಾಡ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಬುಧವಾರ ಬೆಳಗಿನ ಜಾವದವರೆಗೂ ಹಿಂಸಾಚಾರದ ಘಟನೆಗಳು ವರದಿಯಾಗಿವೆ.

ಕಾಸಾಯಿವಾಡದಲ್ಲಿ ರಾಜ್ಯ ಸಚಿವ ಗುಲಾಬರಾವ್ ಪಾಟೀಲ್ ಅವರ ಕಾರಿನ ಚಾಲಕ ಮತ್ತು ಸ್ಥಳೀಯರ ಗುಂಪು ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಚಾಲಕ ಹಾರ್ನ್ ಮಾಡಿ ದಾರಿ ಮಾಡಿಕೊಡುವಂತೆ ಕೇಳಿಕೊಂಡಿದ್ದಕ್ಕೆ ಘರ್ಷಣೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

ಶಿವಸೇನೆ ಮುಖಂಡ ಹಾಗೂ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಪಾಟೀಲ್ ಅವರಿಗೆ ಸೇರಿದ ಕಾರು ಇದಾಗಿದ್ದು. ಅವರು ಕಾರಿನಲ್ಲಿರಲಿಲ್ಲ. ಅವರ ಕುಟುಂಬದ ಸದಸ್ಯರೊಬ್ಬರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.

ಸ್ಥಳದಲ್ಲಿ ವಾಗ್ವಾದ ಬಳಿಕ ಕೆಲವು ಜನರು ನಂತರ ಗ್ರಾಮದ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಆ ವೇಳೆ ಅಲ್ಲಿಗೆ ಮತ್ತೊಂದು ಆಗಮಿಸಿದ ನಂತರ ಘರ್ಷಣೆ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗ್ರಾಮದ ಹಲವಾರು ಅಂಗಡಿಗಳು ಸುಟ್ಟು ಹೋಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ಗಲಭೆ ನಿಯಂತ್ರಣ ಪೊಲೀಸ್ ತಂಡಗಳೊಂದಿಗೆ ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗಿದೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಳೀಸರು ತಿಳಿಸಿದ್ದಾರೆ.

ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಆರೋಪದ ಮೇಲೆ ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News