ಏಕಾಏಕಿ ಹೊರಚಿಮ್ಮಿದ ಅಂತರ್ಜಲ | ಮಣ್ಣು-ನೀರಿನಡಿಯಲ್ಲಿ ಮುಳುಗಿದ ಬೋರ್‌ವೆಲ್ ಯಂತ್ರ

Update: 2025-01-03 15:37 GMT

PC : timesofindia.indiatimes.com

ಜೈಪುರ : ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಮೋಹನ್‌ ಗಢದಲ್ಲಿ ರೈತನೊಬ್ಬ ತನ್ನ ಜಮೀನಿನಲ್ಲಿ ಕೊಳವೆ ಬಾವಿ ತೋಡುತ್ತಿದ್ದಾಗ ನೆಲ ಕುಸಿದಿದ್ದು, ಏಕಾಏಕಿ ಅಂತರ್ಜಲ ಉಕ್ಕಿ ಹರಿದಿದೆ.

ನೀರಿಗಾಗಿ 850 ಅಡಿಯಷ್ಟು ಆಳದವರೆಗೂ ಭೂಮಿಯನ್ನು ಕೊರೆಯಲಾಗುತ್ತಿದ್ದಂತೆ, ಏಕಾಏಕಿ ನೆಲದಡಿಯಿಂದ ಅನಿಲ ಸ್ಪೋಟ ನಡೆದಂತ ಸದ್ದು ಕೇಳಿ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬೋರ್‌ ವೆಲ್‌ ಕೊರೆದ ಜಾಗದ ಸುತ್ತಲಿನ ಮಣ್ಣು ಕುಸಿಯಲು ಆರಂಭಿಸಿದ್ದು, ಕೊರೆಯಲು ಬಂದಿದ್ದ ಬೋರ್‌ ವೆಲ್‌ ಯಂತ್ರದ ಟ್ರಕ್‌ ಗುಂಡಿಯಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಘಟನೆಯನ್ನು ಆಶ್ಚರ್ಯ ಚಕಿತದಿಂದ ಜನರು ನೋಡ ನೋಡುತ್ತಿದ್ದಂತೆ, ನೆಲದಡಿಯಿಂದ ಉಕ್ಕಿ ಬಂದ ನೀರು ಹೊಳೆಯಾಗಿ ಹರಿಯಲಾರಂಭಿಸಿತು.

ಸದ್ಯ ಗ್ರಾಮದಲ್ಲೆಲ್ಲಾ ನೀರು ಹರಿದಿದ್ದು, ನೆರೆಯ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಂತರ್ಜಲ ಇಲಾಖೆಯ ತಂಡವು ಸ್ಥಳಕ್ಕೆ ತಲುಪಿ, ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದಲ್ಲಿ ನೆಲದಿಂದ ನೀರು ಹೊರಬಂದ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.

ಗ್ರಾಮವೇ ಮುಳುಗಡೆಯಾಗುವಷ್ಟು ನೀರು ಹರಿಯಲಾರಂಭಿಸಿರುವ ಜಾಗಕ್ಕೆ ಯಾವುದೇ ಸಾರ್ವಜನಿಕರು ಹೋಗದಂತೆ ಅಧಿಕಾರಿಗಳು ತಡೆನೀಡಿದ್ದಾರೆ.

ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಪುರಾಣಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿಯೇ ಮರುಹುಟ್ಟಿ ಪಡೆದಿದೆ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ರಕ್ಷಣಾತ್ಮಕ ಪದರವನ್ನು ಬೋರ್‌ ವೆಲ್‌ ಯಂತ್ರವು ಬೇಧಿಸಿದಾಗ, ಮರಳು ಮತ್ತು ಜೇಡಿಮಣ್ಣಿನ ದಪ್ಪ ಪದರಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ನೀರು ಏಕಾಏಕಿ ಹೊರಬರಲಾರಂಭಿಸಿದೆ ಎಂದು ಅಂತರ್ಜಲ ಹಾಗೂ ಭೂಗರ್ಭ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News