ನಿಮಿಷಾ ಪ್ರಿಯಾರ ಪ್ರಕರಣವನ್ನು ನಿಕಟವಾಗಿ ಗಮನಿಸಲಾಗುತ್ತಿದೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

Update: 2025-01-03 15:39 GMT

ನಿಮಿಷಾ ಪ್ರಿಯಾ | PC : deccanherald.com

ಹೊಸದಿಲ್ಲಿ: ಯೆಮೆನ್ ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ಮೂಲದ ಶುಶ್ರೂಷಕಿ ನಿಮಿಷಾ ಪ್ರಿಯಾರ ಪ್ರಕರಣದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಶುಕ್ರವಾರ ಭಾರತ ಹೇಳಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೊಡೆ ಗ್ರಾಮದ ನಿವಾಸಿಯಾದ ನಿಮಿಷಾ ಪ್ರಿಯಾ, ಜುಲೈ, 2017ರಲ್ಲಿ ನಡೆದಿದ್ದ ಯೆಮೆನ್ ಪ್ರಜೆಯ ಹತ್ಯೆಯಲ್ಲಿ ದೋಷಿ ಎಂದು ಯೆಮೆನ್ ನ್ಯಾಯಾಲಯ ತೀರ್ಪು ನೀಡಿದೆ.

ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, “ನಿಮಿಷಾ ಪ್ರಿಯಾಗೆ ವಿಧಿಸಲಾಗಿರುವ ಮರಣ ದಂಡನೆ ಬೆಳವಣಿಗೆಗಳ ಕುರಿತು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲ ನೆರವನ್ನೂ ಸರಕಾರ ವಿಸ್ತರಿಸಲಿದೆ” ಎಂದು ತಿಳಿಸಿದ್ದಾರೆ.

37 ವರ್ಷದ ಶುಶ್ರೂಷಕಿ ನಿಮಿಷಾ ಪ್ರಿಯಾರನ್ನುಸದ್ಯ ಇರಾನ್ ಬೆಂಬಲಿತ ಹೌಥಿಗಳ ಹಿಡಿತದಲ್ಲಿರುವ ಯೆಮೆನ್ ದೇಶದ ರಾಜಧಾನಿ ಸನಾ ನಗರದ ಜೈಲಿನಲ್ಲಿಡಲಾಗಿದೆ.

ಈ ನಡುವೆ, ಈ ಪ್ರಕರಣದಲ್ಲಿ ಏನೆಲ್ಲ ಮಾಡಲು ಸಾಧ್ಯವೊ ಅದೆಲ್ಲವನ್ನೂ ತಾನು ಮಾಡುವುದಾಗಿ ಗುರುವಾರ ಇರಾನ್ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ.

ಯೆಮೆನ್ ಪ್ರಜೆಯಾದ ತಲಾಲ್ ಅಬ್ದೊ ಮಹ್ದಿ ಎಂಬಾತನಿಂದ ತಮ್ಮ ಪಾಸ್ ಪೋರ್ಟ್ ಅನ್ನು ಮರಳಿ ಪಡೆಯಲು ನಿಮಿಷಾ ಪ್ರಿಯಾ, ಆತನಿಗೆ ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ಅರವಳಿಕೆ ಚುಚ್ಚುಮದ್ದು ನೀಡಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಯೆಮೆನ್ ಸುಪ್ರೀಂ ಕೋರ್ಟ್, ನಿಮಿಷಾ ಪ್ರಿಯಾರನ್ನು ದೋಷಿ ಎಂದು ಘೋಷಿಸಿ, ಮರಣ ದಂಡನೆಯನ್ನು ವಿಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News