ಜೈವಿಕ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಮರಳಿ ಬಂದ ಸ್ಪೇನ್ ಮಹಿಳೆ!

Update: 2025-01-05 14:11 GMT

PC : PTI

ಭುವನೇಶ್ವರ: 20 ವರ್ಷಗಳ ಹಿಂದೆ ತನ್ನನ್ನು ಹಾಗೂ ಸಹೋದರನನ್ನು ತೊರೆದಿದ್ದ ತನ್ನ ಜೈವಿಕ ತಾಯಿಯನ್ನು ಹುಡುಕಿಕೊಂಡು ಸ್ನೇಹಾ ಎಂಬ 21 ವರ್ಷದ ಸ್ಪಾನಿಶ್ ಪ್ರಜೆ ಭಾರತಕ್ಕೆ ಮರಳಿದ್ದಾರೆ.

ಆದರೆ, ಸ್ನೇಹಾಗೆ ಸಮಯಾವಕಾಶ ಕೈಮೀರುತ್ತಿದ್ದು, ತನ್ನ ಶೈಕ್ಷಣಿಕ ಬಾಧ್ಯತೆಯ ಕಾರಣಕ್ಕೆ ಅವರು ಸೋಮವಾರ ಮತ್ತೆ ಸ್ಪೇನ್ ಗೆ ಮರಳುತ್ತಿದ್ದಾರೆ.

ಮಕ್ಕಳ ಶಿಕ್ಷಣ ಸಂಶೋಧಕಿಯಾದ ಸ್ನೇಹಾ, ತನ್ನ ಮೂಲ ಪತ್ತೆ ಹಚ್ಚಲು ತಮ್ಮ ಭೂತಕಾಲದ ಅಲ್ಪ ಮಾಹಿತಿಯೊಂದಿಗೆ ಭಾರತಕ್ಕೆ ಮರಳಿದ್ದಾರೆ.

ಸ್ನೇಹಾರ ಹುಡುಕಾಟಕ್ಕೆ ಅವರ ದತ್ತು ಪೋಷಕರಾದ ಗೇಮಾ ವಿಡಾಲ್ ಹಾಗೂ ಜುವಾನ್ ಜೋಶ್ ಕೂಡಾ ಬೆಂಬಲ ನೀಡಿದ್ದು, ಸ್ನೇಹಾರೊಂದಿಗೆ ಗೇಮಾ ಕೂಡಾ ಆಕೆಯ ತವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. 2005ರಲ್ಲಿ ಸ್ನೇಹಾ ಹಾಗೂ ಅವರ ಸಹೋದರ ಸೋಮುವನ್ನು ಅವರ ತಾಯಿ ಬನಲತಾ ತೊರೆದು ಹೋದ ನಂತರ, ಗೇಮಾ ವಿಡಾಲ್ ಹಾಗೂ ಜುವಾನ್ ಜೋಶ್ ಎಂಬ ದಂಪತಿಗಳು ಅವರಿಬ್ಬರನ್ನೂ ಭುವನೇಶ್ವರದ ಅನಾಥಾಲಯವೊಂದರಿಂದ ದತ್ತು ಪಡೆದಿದ್ದರು.

“ನಾನು ಸ್ಪೇನ್ ನಿಂದ ಭುವನೇಶ್ವರಕ್ಕೆ ಪ್ರಯಾಣ ಮಾಡುತ್ತಿರುವುದರ ಉದ್ದೇಶ ನನ್ನ ಜೈವಿಕ ಪೋಷಕರು, ವಿಶೇಷವಾಗಿ ನನ್ನ ತಾಯಿಯನ್ನು ಪತ್ತೆ ಹಚ್ಚುವುದಾಗಿದೆ. ನಾನು ಆಕೆಯನ್ನು ಪತ್ತೆ ಮಾಡಬೇಕು ಹಾಗೂ ಆಕೆಯನ್ನು ಭೇಟಿ ಮಾಡಬೇಕು. ಇದು ತುಂಬಾ ಕಠಿಣವಾಗಿದ್ದರೂ, ನಾನು ಈ ಪ್ರಯಾಣಕ್ಕೆ ಸಂಪೂರ್ಣವಾಗಿ ಸನ್ನದ್ಧಳಾಗಿದ್ದೇನೆ” ಎಂದು ಸ್ನೇಹಾ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸ್ಪೇನ್ ನ ಝರ್ಗೋಝಾ ನಗರದಲ್ಲಿ ಯೋಗ ಶಿಕ್ಷಕಿಯಾಗಿರುವ ಗೇಮಾರೊಂದಿಗೆ ಕಳೆದ ವರ್ಷದ ಡಿಸೆಂಬರ್ 19ರಂದು ಭುವನೇಶ್ವರಕ್ಕೆ ಆಗಮಿಸಿರುವ ಸ್ನೇಹಾ, ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ, ಸೋಮುಗೆ ಸ್ಪೇನ್ ನಲ್ಲಿ ಒಂದಿಷ್ಟು ಕೆಲಸವಿದ್ದುದರಿಂದ, ಅವರು ಭಾರತಕ್ಕೆ ಆಗಮಿಸಿಲ್ಲ.

ಒಂದು ವೇಳೆ, ಸೋಮವಾರದ ವೇಳೆಗೇನಾದರೂ ಸ್ನೇಹಾರ ಜೈವಿಕ ತಾಯಿ ಪತ್ತೆಯಾದರೆ, ಅವರೊಂದಿಗೆ ದೀರ್ಘಕಾಲ ಉಳಿಯಲು ಮಾರ್ಚ್ ತಿಂಗಳಲ್ಲಿ ಸ್ನೇಹಾ ಮರಳಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News