ದಿಲ್ಲಿ- ಮೀರತ್ ರೈಲ್ವೆ ಕಾರಿಡಾರ್‌ನ 13 ಕಿ.ಮೀ. ವಿಸ್ತೀರ್ಣದ ಸೆಕ್ಷನ್ ಉದ್ಘಾಟಿಸಿದ ಮೋದಿ
ಹೊಸದಿಲ್ಲಿ : ರಾಜಧಾನಿ ಹೊಸದಿಲ್ಲಿಯನ್ನು ಉತ್ತರಪ್ರದೇಶದ ಮೀರತ್ ಜೊತೆ ಸಂಪರ್ಕಿಸುವ ಆರ್‌ಆರ್‌ಟಿಎಸ್ ಕಾರಿಡಾರ್‌ನ ಭಾಗವಾದ 13 ಕಿ.ಮೀ. ವಿಸ್ತೀರ್ಣ ಸಾಹಿಬಾಬಾದ್- ನ್ಯೂಅಶೋಕ್ ನಗರ ಸೆಕ್ಷನ್ ಅನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಉದ್ಘಾಟಿಸಿದರು.
ಆರ್‌ಆರ್‌ಟಿಎಸ್ ಕಾರಿಡಾರ್ ಮೂಲಕ ರಾಷ್ಟ್ರ ರಾಜಧಾನಿಯನ್ನು ರವಿವಾರ ಪ್ರವೇಶಿಸಿದ ನಮೋಭಾರತ್ ರೈಲಿನಲ್ಲಿ ಪ್ರಧಾನಿ ಮೋದಿಯವರು ಗಾಝಿಯಾಬಾದ್‌ನ ಸಾಹಿಬಾಬಾದ್‌ನಿಂದ ಹೊಸದಿಲ್ಲಿಯ ನ್ಯೂ ಅಶೋಕ್ ನಗರದವರೆಗೆ ಪ್ರಯಾಣಿಸಿದರು. ಮಕ್ಕಳು ಸೇರಿದಂತೆ ರೈಲು ಪ್ರಯಾಣಿಕರೊಂದಿಗೆ ಅವರು ಸಂವಾದ ನಡೆಸಿದರು.
ಪ್ರಾದೇಶಿಕ ಕ್ಷಿಪ್ರ ಸಂಚಾರ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್ ಉದ್ಘಾಟನೆಯೊಂದಿಗೆ ಉತ್ತರಪ್ರದೇಶದ ಮೀರತ್ ನಗರದ ಜೊತೆ ಹೊಸದಿಲ್ಲಿಯು ನೇರ ರೈಲು ಸಂಪರ್ಕವನ್ನು ಪಡೆದುಕೊಂಡಿದ್ದು, ದಿಲ್ಲಿ ಪ್ರಯಾಣಿಕರು ಕೇವಲ 40 ನಿಮಿಷಗಳಲ್ಲಿ ಮೀರತ್ ನಗರವನ್ನು ತಲುಪಬಹುದಾಗಿದೆ.
ಅಶೋಕ್ ನಗರ ಹಾಗೂ ಮೀರತ್ ದಕ್ಷಿಣದ ನಡುವಿನ 55 ಕಿ.ಮೀ. ವಿಸ್ತೀರ್ಣದ ಆರ್‌ಆರ್‌ಟಿಎಸ್ ಕಾರಿಡಾರ್‌ನಲ್ಲಿ ಒಟ್ಟು 11 ರೈಲು ನಿಲ್ದಾಣಗಳು ಕಾರ್ಯನಿರ್ವಹಿಸುತ್ತವೆ. ಈ ರೈಲು ಮಾರ್ಗದಲ್ಲಿ ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸುತ್ತವೆ.
ಅಶೋಕ್ ನಗರದಿಂದ ಮೀರತ್ ದಕ್ಷಿಣ ರೈಲು ನಿಲ್ದಾಣದವರೆಗೆ ರೈಲು ಪ್ರಯಾಣ ದರವು ಸ್ಟ್ಯಾಂಡರ್ಡ್ ಕೋರ್ಚ್‌ನಲ್ಲಿ 150 ರೂ. ಹಾಗೂ ಪ್ರೀಮಿಯಂ ಕೋಚ್‌ನಲ್ಲಿ 225 ರೂ . ಆಗಿದೆ. ಈ ವರೆಗೆ ನಮೋ ಭಾರತ್ ರೈಲಿನಲ್ಲಿ 50 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ.
ನ್ಯೂಅಶೋಕ್ ನಗರ-ಸರಾಯ್ ಕಾಲೆ ಖಾನ್ ಹಾಗೂ ಮೀರತ್ ದಕ್ಷಿಣ- ಮೋದಿಪುರಂ ಸೆಕ್ಷನ್‌ಗಳ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆಯತ್ತಿರುವುದಾಗಿ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂತನವಾಗಿ ಉದ್ಘಾಟನೆಗೊಂಡಿರುವ 13 ಕಿ.ಮೀ. ವಿಸ್ತೀರ್ಣದ ಸಾಹಿಬಾಬಾದ್- ನ್ಯೂ ಅಶೋಕ್‌ನಗರ ಸೆಕ್ಷನ್‌ನಲ್ಲಿ ಆನಂದ್ ವಿಹಾರ್ ಸೇರಿದಂತೆ 6 ಕಿ.ಮೀ. ದೂರದವರೆಗೆ ರೈಲು ನೆಲದಡಿಯಲ್ಲಿಯೇ ಸಂಚರಿಸುತ್ತದೆ.