ದಿನಕ್ಕೆ 48 ಕೋಟಿ ರೂ. ವೇತನ ಪಡೆಯುತ್ತಿರುವ ಭಾರತೀಯ ಮೂಲದ ಟೆಕ್ಕಿ!

Update: 2025-01-05 15:42 GMT

ಉದ್ಯಮಿ ಜಗದೀಪ್ ಸಿಂಗ್ | PC : X/@QuantumScapeCo

ಹೊಸದಿಲ್ಲಿ: ವಾರ್ಷಿಕ 17,500 ಕೋಟಿ ರೂ. ವೇತನ ಹಾಗೂ 48 ಕೋಟಿ ರೂ. ದೈನಂದಿನ ಆದಾಯದ ಮೂಲಕ ಭಾರತೀಯ ಮೂಲದ ಉದ್ಯಮಿ ಜಗದೀಪ್ ಸಿಂಗ್, ಇಡೀ ವಿಶ್ವದಲ್ಲೇ ಅತಿ ಹೆಚ್ಚು ವೇತನ ಪಡೆಯುತ್ತಿರುವ ಹಿರಿಮೆಗೆ ಭಾಜನರಾಗಿದ್ದಾರೆ.

NDTV ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಜಗದೀಪ್ ಸಿಂಗ್ ರ ವೇತನ ಪ್ರಮಾಣವು ಹಲವಾರು ಪ್ರಖ್ಯಾತ ಕಂಪನಿಗಳ ವಾರ್ಷಿಕ ವರಮಾನಕ್ಕಿಂತಲೂ ಹೆಚ್ಚಿದೆ ಎಂದು ಹೇಳಲಾಗಿದೆ.

ವಿದ್ಯುತ್ ಚಾಲಿತ ವಾಹನದ ಬ್ಯಾಟರಿ ತಯಾರಿಕಾ ಸಂಸ್ಥೆಯಾದ ಕ್ವಾಂಟಮ್ ಸ್ಕೇಪ್ ನ ಸಂಸ್ಥಾಪಕರ ಪೈಕಿ ಓರ್ವರಾದ ಜಗದೀಪ್ ಸಿಂಗ್, ಹೆವ್ಲೆಟ್-ಪ್ಯಾಕರ್ಡ್ ಹಾಗೂ ಸನ್ ಮೈಕ್ರೊಸಿಸ್ಟಮ್ಸ್ ನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.

ನಂತರ, 1992ರಲ್ಲಿ ಸ್ಥಾಪನೆಯಾದ ಏರ್ ಸಾಫ್ಟ್ ಸೇರಿದಂತೆ ಹಲವಾರು ನವೋದ್ಯಮಗಳನ್ನು ಅವರು ಸ್ಥಾಪಿಸಿದರು.

ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪೂರೈಸಿದ ಜಗದೀಪ್ ಸಿಂಗ್, ನಂತರ ಬರ್ಕ್ಲೆಯಲ್ಲಿನ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಪೂರೈಸಿದ್ದರು.

2010ರಲ್ಲಿ ಕ್ವಾಂಟಮ್ ಸ್ಕೇಪ್ ಎಂಬ ಕಂಪೆನಿಯನ್ನು ಜಗದೀಪ್ ಸಿಂಗ್ ಸ್ಥಾಪಿಸಿದರು. ಈ ಕಂಪನಿಯು ಆವಿಷ್ಕಾರ ವಲಯದಲ್ಲಿ ಪ್ರಗತಿ ಸಾಧಿಸುವತ್ತ, ನಿರ್ದಿಷ್ಟವಾಗಿ ಬ್ಯಾಟರಿ ತಂತ್ರಜ್ಞಾನ ವಲಯದಲ್ಲಿ ಪ್ರಗತಿ ಸಾಧಿಸುವತ್ತ ಗಮನ ಕೇಂದ್ರೀಕರಿಸಿತು.

ಕ್ವಾಂಟಮ್ ಸ್ಕೇಪ್ ಕಂಪನಿಯಲ್ಲಿ ಸಾಂಪ್ರದಾಯಿಕ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸುವ ಬದಲು ವಿದ್ಯುತ್ ಚಾಲಿತ ವಾಹನಗಳಿಗೆ ಘನೀಕೃತ ಬ್ಯಾಟರಿಗಳನ್ನು ಬಳಸುವ ನೂತನ ಧೋರಣೆಯನ್ನು ಅಳವಡಿಸಿಕೊಂಡರು. ಈ ಬ್ಯಾಟರಿಗಳಲ್ಲಿ ದ್ರವೀಕೃತ ಎಲೆಕ್ಟ್ರೋಲೈಟ್ ಗಳು ಬಳಕೆಯಾಗದಿರುವುದರಿಂದ, ಅವು ಸುರಕ್ಷಿತವಾಗಿರುತ್ತವೆ. ಇದಲ್ಲದೆ, ಅವು ವಾಹನಗಳನ್ನು ವೇಗವಾಗಿ ಚಾರ್ಜ್ ಮಾಡುತ್ತವೆ ಹಾಗೂ ಇಂಧನ ಸಾಂದ್ರತೆಯನ್ನು ಹೆಚ್ಚಿಸುತ್ತವೆ. ಆ ಮೂಲಕ ವಿದ್ಯುತ್ ಚಾಲಿತ ವಾಹನಗಳ ಮಾಲಕರು ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ದೂರವಾಗಿಸುತ್ತವೆ.

ಕಳೆದ ತಿಂಗಳು ಈ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದಿದ್ದ ಜಗದೀಪ್ ಸಿಂಗ್, ತಮ್ಮ ಹುದ್ದೆಯನ್ನು ಶಿವ ಶಿವರಾಮ್ ಅವರಿಗೆ ಬಿಟ್ಟುಕೊಟ್ಟಿದ್ದರು. ಸೆಪ್ಟೆಂಬರ್ 2023ರಲ್ಲಿ ಶಿವ ಶಿವರಾಮ್ ಕಂಪನಿಯ ಅಧ್ಯಕ್ಷರಾಗಿ ಸೇರ್ಪಡೆಯಾಗಿದ್ದರೂ, ಜಗದೀಪ್ ಸಿಂಗ್ ಈಗಲೂ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಅವರ LinkedIn ಖಾತೆಯ ಪ್ರಕಾರ, ಅವರೀಗ ಇನ್ನೂ ಬಹಿರಂಗವಾಗದ ಹೆಸರಿಲ್ಲದ ನವೋದ್ಯಮವೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News