ಕೇಂದ್ರದ ಕರಡು ಡಿಪಿಡಿಪಿ ನಿಯಮಾವಳಿಗೆ ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಆಹ್ವಾನ
ಹೊಸದಿಲ್ಲಿ : ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಕಾಯ್ದೆ, 2023ರಡಿ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ರೂಪಿಸಲಾಗಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿಪಿಡಿಪಿ) ನಿಯಮಾವಳಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದ್ದ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರವಿವಾರ ಆ ಕುರಿತು ವಿವರಣೆಗಳನ್ನು ನೀಡಿದೆ. ಸಾರ್ವಜನಿಕರು ಸರ್ಕಾರದ ಪೋರ್ಟಲ್ ಮೂಲಕ ಕರಡು ನಿಯಮಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು 2025, ಫೆ.18ರೊಳಗೆ ಸಲ್ಲಿಸಬಹುದು ಎಂದು ಅದು ತಿಳಿಸಿದೆ.
ಡಿಪಿಡಿಪಿ ಕಾಯ್ದೆ ಮತ್ತು ಕರಡು ನಿಯಮಗಳನ್ನು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಕ್ಷಿಪ್ರ ಬೆಳವಣಿಗೆಗಳಿಗೆ ಅನುಗುಣವಾಗಿರುವಂತೆ ರೂಪಿಸಲಾಗಿದೆ. ಸಂಪೂರ್ಣ ಡಿಜಿಟಲ್ ಘಟಕವಾಗಿ ವಿನ್ಯಾಸಗೊಳಿಸಲಾಗಿರುವ ದತ್ತಾಂಶ ಸಂರಕ್ಷಣೆ ಮಂಡಳಿಯು ಭೌತಿಕ ಉಪಸ್ಥಿತಿಯ ಅಗತ್ಯವಿಲ್ಲದೆ ನಾಗರಿಕರು ಆನ್‌ಲೈನ್ ಮೂಲಕ ದೂರುಗಳನ್ನು ಸಲ್ಲಿಸಲು ಮತ್ತು ವಿವಾದಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ ಎಂದು ಸಚಿವಾಲಯವು ತಿಳಿಸಿದೆ.
ನಾಗರಿಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಲಾಗುವುದು ಮತ್ತು ಬಹುಭಾಷಾ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ತಮ್ಮ ವೈಯಕ್ತಿಕ ಡೇಟಾವನ್ನು ನಿರ್ವಹಿಸುವ ಅಧಿಕಾರವನ್ನು ಅವರಿಗೆ ನೀಡಲಾಗುವುದು.
ಆನ್‌ಲೈನ್ ಪ್ರತಿಕ್ರಿಯೆಗಳೊಂದಿಗೆ ನಿಯಮಗಳಿಗೆ ಅಂತಿಮ ರೂಪ ನೀಡಲು ನಾಗರಿಕ ಸಮಾಜ, ಉದ್ಯಮ ಮತ್ತು ಸಂಬಂಧಿಸಿದ ಸರಕಾರಿ ಪ್ರಾಧಿಕಾರಗಳೊಂದಿಗೆ ರಚನಾತ್ಮಕ ಸಮಾಲೋಚನೆಗಳನ್ನು ನಡೆಸಲೂ ಸಚಿವಾಲಯವು ಉದ್ದೇಶಿಸಿದೆ. ಅಂತಿಮಗೊಳಿಸಲಾದ ನಿಯಮಗಳನ್ನು ಅನುಮೋದನೆಗಾಗಿ ಸಂಸತ್ತಿಗೆ ಸಲ್ಲಿಸಲಾಗುವುದು. ಕರಡು ನಿಯಮಗಳು ಅಸ್ತಿತ್ವದಲ್ಲಿರುವ ಡಿಜಿಟಲ್ ಪರಿಪಾಠಗಳಿಗೆ ಅಡ್ಡಿಯಾಗದಂತೆ ವೈಯಕ್ತಿಕ ಹಕ್ಕುಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿವೆ ಎಂದೂ ಸಚಿವಾಲಯವು ತಿಳಿಸಿದೆ.
ಕನಿಷ್ಠ ಪಾಲನಾ ಹೊರೆಯೊಂದಿಗೆ ನೂತನ ನಿಯಮಗಳನ್ನು ಪಾಲಿಸಲು ಸಂಸ್ಥೆಗಳಿಗೆ ಸಾಕಷ್ಟು ಸಮಯಾವಕಾಶವನ್ನು ನೀಡಲಾಗುವುದು. ಕಾಯ್ದೆಯಡಿ ವ್ಯಕ್ತಿಗಳ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಅವರಿಗೆ ನೋಟಿಸ್‌ಗಳನ್ನು ಹೊರಡಿಸುವುದರೊಂದಿಗೆ ಪೂರ್ವ ಸಮ್ಮತಿಯ ಆಧಾರದಲ್ಲಿ ದತ್ತಾಂಶ ಸಂಸ್ಕರಣೆಯನ್ನು ಮುಂದುವರಿಸಲು ಅನುಮತಿಸಲಾಗುವುದು.
ಮಕ್ಕಳ ವೈಯಕ್ತಿಕ ದತ್ತಾಂಶ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ. ಕಡಿಮೆ ಅನುಸರಣಾ ಅಗತ್ಯಗಳೊಂದಿಗೆ ಸ್ಟಾರ್ಟ್‌ಅಪ್‌ಗಳಿಗೆ ಪ್ರಯೋಜನವಾಗುವಂತೆ ನಿಯಮಗಳನ್ನು ರೂಪಿಸಲಾಗಿದೆ. ಡಿಪಿಡಿಪಿ ಕಾಯ್ದೆಯು ಉಲ್ಲಂಘನೆಗಳ ಗಂಭೀರತೆ ಮತ್ತು ಅವಧಿಯನ್ನು ಆಧರಿಸಿ
ಶ್ರೇಣೀಕೃತ ವಿತ್ತೀಯ ದಂಡಗಳನ್ನು ಪರಿಚಯಿಸಿದೆ. ಉದ್ಯಮಗಳು ವಿಚಾರಣೆ ಸಮಯದಲ್ಲಿ ದಂಡವನ್ನು ತಪ್ಪಿಸಿಕೊಳ್ಳಲು ದತ್ತಾಂಶ ಸಂರಕ್ಷಣಾ ಮಂಡಳಿಗೆ ಸ್ವಯಂಪ್ರೇರಿತವಾಗಿ ಮುಚ್ಚಳಿಕೆಗಳನ್ನು ಸಲ್ಲಿಸಬಹುದಾಗಿದೆ ಎಂದು ಸಚಿವಾಲಯವು ವಿವರಿಸಿದೆ.