ಮಹಾರಾಷ್ಟ್ರ | ಕಳೆದ ವರ್ಷ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದ 35 ಅಡಿ ಎತ್ತರದ ಶಿವಾಜಿ ಮಹಾರಾಜ ಪ್ರತಿಮೆ ಕುಸಿತ

Update: 2024-08-26 12:58 GMT

PC : X \ @INCMaharashtra

ಮುಂಬೈ : ಮಹಾರಾಷ್ಟ್ರದ ಸಿಂಧುದುರ್ಗದ ಕೋಟೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯು ಸೋಮವಾರ ಕುಸಿದು ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಲ್ವಾನ್ ನ ರಾಜ್ ಕೋಟ್ ಕೋಟೆಯಲ್ಲಿರುವ 35 ಅಡಿ ಉದ್ದದ ಪ್ರತಿಮೆಯು ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಕುಸಿದು ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ಕುಸಿತಕ್ಕೆ ನಿಖರ ಕಾರಣವೇನೆಂದು ತಜ್ಞರು ಪರಿಶೀಲಿಸಲಿದ್ದಾರೆ. ಆದರೆ, ಕಳೆದ ಎರಡು ಮೂರು ದಿನಗಳಿಂದ ಭಾರಿ ಮಳೆ ಹಾಗೂ ತೀವ್ರ ಗಾಳಿಗೆ ಜಿಲ್ಲೆಯು ಸಾಕ್ಷಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಕಾಂಗ್ರೆಸ್, “ಬಿಜೆಪಿಯ ಭ್ರಷ್ಟ ಆಡಳಿತವು ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಮಹಾರಾಷ್ಟ್ರವನ್ನು ಅಗೌರವಿಸಿದೆ” ಎಂದು ಕಿಡಿ ಕಾರಿದೆ.

ಪರಿಸ್ಥಿತಿಯನ್ನು ಅವಲೋಕಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಡಿಸೆಂಬರ್ 4ರಂದು ನೌಕಾಪಡೆ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅಲ್ಲದೆ, ಕೋಟೆಯಲ್ಲಿ ನಡೆದಿದ್ದ ಸಂಭ್ರಮಾಚರಣೆಯಲ್ಲೂ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News