ಉಜ್ಜಯಿನಿ ದೇವಸ್ಥಾನದ ಗರ್ಭಗುಡಿಗೆ ಏಕನಾಥ್ ಶಿಂಧೆ ಪುತ್ರ ಪ್ರವೇಶ: ವಿವಾದದ ಬೆನ್ನಲ್ಲೇ ಅಧಿಕಾರಿ ವಜಾ
ಮಹಾರಾಷ್ಟ್ರ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಗರ್ಭಗುಡಿ ಪ್ರವೇಶ ವಿವಾದದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು ಅಧಿಕಾರಿಯೋರ್ವರನ್ನು ವಜಾಗೊಳಿಸಿದೆ.
ಕಲ್ಯಾಣ್ ಕ್ಷೇತ್ರದ ಲೋಕಸಭಾ ಸದಸ್ಯ, ಸಿಎಂ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಅವರಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಗುರುವಾರ ಸಂಜೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಈ ವಿಚಾರವಾಗಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ದೇವಸ್ಥಾನದ ಆಡಳಿತಾಧಿಕಾರಿ ಗಣೇಶ್ ಧಾಕಡ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದರ್ಶನ ವ್ಯವಸ್ಥೆಯ ಉಸ್ತುವಾರಿ ವಿನೋದ್ ಚೌಕ್ಸೆ ಅವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ವಜಾ ಮಾಡಲಾಗಿದೆ. ಮೂವರು ಭದ್ರತಾ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಮಹಾಕಾಳೇಶ್ವರನ ದರ್ಶನಕ್ಕೆ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯಬೇಕಾಗುತ್ತದೆ , ಆದರೆ ಗರ್ಭಗುಡಿ ಪ್ರವೇಶಕ್ಕೆ ನಿಷೇಧವಿದ್ದರೂ ವಿಐಪಿಗಳಿಗೆ ಅನುಮತಿ ನೀಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಮಹೇಶ್ ಪರ್ಮಾರ್ ಆರೋಪಿಸಿದ್ದರು.
ಉಜ್ಜಯಿನಿ ಜಿಲ್ಲಾಧಿಕಾರಿ ನೀರಜ್ ಕುಮಾರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾರಿಗೂ ಗರ್ಭಗುಡಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಇದು ಅನಧಿಕೃತ ಪ್ರವೇಶವಾಗಿದ್ದು, ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ದೇವಸ್ಥಾನದ ಆಡಳಿತಾಧಿಕಾರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು.