ಮಹಾರಾಷ್ಟ್ರ | 7 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಸಲು ಪ್ರಕಾಶ್ ಅಂಬೇಡ್ಕರ್ ಘೋಷಣೆ
ಮುಂಬೈ : ಮಹಾರಾಷ್ಟ್ರದ 7 ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಪಕ್ಷ ಕಾಂಗ್ರೆಸ್ ಗೆ ಬೆಂಬಲ ನೀಡಲಿದೆ ಎಂದು ವಂಚಿತ್ ಬಹುಜನ್ ಅಘಾಡಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಸ್ಥಾನಗಳಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಪ್ರಕಾಶ್ ಅಂಬೇಡ್ಕರ್, ‘‘ನಿಮ್ಮ ಆಯ್ಕೆಯ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವಂಚಿತ್ ಬಹುಜನ್ ಆಘಾಡಿ ಸಂಪೂರ್ಣ ಕ್ಷೇತ್ರೀಯ ಹಾಗೂ ವ್ಯೆಹಾತ್ಮಕ ಬೆಂಬಲ ನೀಡಲಿದೆ’’ ಎಂದು ಹೇಳಿದ್ದಾರೆ.
‘‘ಎಂವಿಎ (ಮಹಾ ವಿಕಾಸ್ ಅಘಾಡಿ)ಯಲ್ಲಿ ಕಾಂಗ್ರೆಸ್ ಗೆ ನಿಗದಿಪಡಿಸಲಾದ ಕೋಟಾದಿಂದ 7 ಕ್ಷೇತ್ರಗಳ ಹೆಸರುಗಳ ಪಟ್ಟಿ ಮಾಡುವಂತೆ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ’’ ಎಂದು ಪ್ರಕಾಶ್ ಅಂಬೇಡ್ಕರ್ ಬರೆದಿದ್ದಾರೆ.
ರಾಜ್ಯಮಟ್ಟದ ಪ್ರತಿಪಕ್ಷಗಳ ಮೈತ್ರಿಕೂಟವಾದಿ ಮಹಾ ವಿಕಾಸ್ ಅಘಾಡಿಯನ್ನು 2019ರ ವಿಧಾನ ಸಭೆ ಚುನಾವಣೆಗಳ ಬಳಿಕ ರೂಪಿಸಲಾಯಿತು. ಈ ಮೈತ್ರಿಕೂಟ ಮುಖ್ಯವಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್ಸಿಪಿ ಬಣವನ್ನು ಒಳಗೊಂಡಿದೆ.
ಜನವರಿಯಲ್ಲಿ ಶಿವಸೇನೆ (ಉದ್ಧವ್ ಬಾಳಾ ಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ ಅವರು ವಂಚಿತ್ ಬಹುಜನ ಅಘಾಡಿಯನ್ನು ಮೈತ್ರಿಕೂಟಕ್ಕೆ ಸೇರ್ಪಡೆಗೊಳಿಸುವುದಾಗಿ ಘೋಷಿಸಿದ್ದರು.
ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಘೋಷಿಸಿದ ಬಳಿಕ ವಂಚಿತ್ ಬಹುಜನ ಅಘಾಡಿಯನ್ನು ಆಹ್ವಾನಿಸದೆ ಹಲವು ಸಭೆಗಳನ್ನು ನಡೆಸಿದೆ ಎಂದು ಪ್ರಕಾಶ್ ಅಂಬೇಡ್ಕರ್ ಅವರು ಖರ್ಗೆ ಅವರಿಗೆ ಪತ್ರದಲ್ಲಿ ಹೇಳಿದ್ದಾರೆ.