ಕೇಂದ್ರದ ನಿರ್ದೇಶನ ಧಿಕ್ಕರಿಸಿ ಚೀನಾದಿಂದ ದುಬಾರಿ ಉಪಕರಣಗಳನ್ನು ಆಮದು ಮಾಡಿಕೊಂಡ ಮಹಾರಾಷ್ಟ್ರ
ಮುಂಬೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕಾರ ಮೇಡ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸುತ್ತಿದ್ದರೆ, ಮಹಾರಾಷ್ಟ್ರದ ವೃತ್ತಿ ಶಿಕ್ಷಣ ಮತ್ತು ತರಬೇತಿ ನಿರ್ದೇಶನಾಲಯ, ಕೇಂದ್ರದ ಮಾರ್ಗಸೂಚಿಯನ್ನು ಧಿಕ್ಕರಿಸಿ, ಹಲವು ಕೋಟಿ ರೂಪಾಯಿ ಮೌಲ್ಯದ ಎಲ್‍ಸಿಡಿ ಸಂವಾದ ಪ್ಯಾನೆಲ್‍ಗಳನ್ನು ಸರ್ಕಾರದ ಇ-ಮಾರ್ಕೆಟ್‍ಪ್ಲೇಸ್‍ನಲ್ಲಿ ಸ್ಥಾನ ಪಡೆಯದ ಚೀನಾದ ಬೆಂಕ್ ಕಂಪನಿಯಿಂದ ಆಮದು ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ಇಲಾಖೆ ಭಾರತೀಯ ಉತ್ಪಾದಕ ಕಂಪನಿಗಳನ್ನು ಪೈಪೋಟಿಯಿಂದ ಹೊರಹಾಕುವ ಸಲುವಾಗಿ ಕೆಲ ಪ್ರಮಾಣೀಕರಣದ ಅಗತ್ಯತೆಯನ್ನು ಕಡ್ಡಾಯಪಡಿಸಿದ್ದರೂ, ಕೊನೆಗೂ ಆ ಪ್ರಮಾಣೀಕರಣ ಇಲ್ಲದ ಉತ್ಪನ್ನವನ್ನು ಆಮದು ಮಾಡಿಕೊಂಡಿರುವುದು ಹಲವರ ಹುಬ್ಬೇರಿಸಿದೆ.
ಈ ಪ್ಯಾನೆಲ್‍ಗಳಿಗೆ ನೀಡಿದ ದರ ಸರಾಸರಿ ದರಕ್ಕಿಂತ ಅಧಿಕ ಎಂಬ ಆರೋಪ ಕೇಳಿಬಂದಿದೆ.
ಖರೀದಿ ಏಜೆನ್ಸಿಗಳು ಆಯ್ಕೆ ಮಾಡಿಕೊಳ್ಳುವಂತೆ ಉತ್ತೇಜಿಸಲಾಗುವ ಮೇಕ್ ಇನ್ ಇಂಡಿಯಾ ಖರೀದಿ ಆದ್ಯತೆಯನ್ನು ನಿಷ್ಕ್ರಿಯಗೊಳಿಸಿ ಜಿಇಎಂ ಪೋರ್ಟೆಲ್‍ನಲ್ಲಿ ಈ ಟೆಂಡರ್ ಕರೆಯಲಾಗಿದೆ. ಕೈಗಾರಿಕಾ ತರಬೇತಿ ಸಂಸ್ಥೆಗಳ ಶಿಕ್ಷಕರು ಪ್ರತಿ ಪ್ಯಾನೆಲ್‍ಗೆ ನೀಡಿದ ಬೆಲೆಯ ಬಗ್ಗೆ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ಜಿಇಎಂ ಪೋರ್ಟೆಲ್‍ನಲ್ಲಿ ತೈವಾನ್‍ನಲ್ಲಿ ಉತ್ಪಾದಿಸಲಾದ ಬೆಂಕ್ ಕಂಪನಿಯ ಪ್ಯಾನೆಲ್ ಬೆಲೆ 1.3 ಲಕ್ಷ ರೂಪಾಯಿ. ಆದರೆ ಡಿವಿಇಟಿ 242 ಬೆಂಕ್ ಪ್ಯಾನಲ್‍ಗಳನ್ನು 2.2 ಲಕ್ಷ ರೂಪಾಯಿ ದರದಲ್ಲಿ ಖರೀದಿಸಿದ್ದು, ಇವು ಚೀನಾದಲ್ಲಿ ಉತ್ಪಾದನೆಯಾದ ಪ್ಯಾನಲ್‍ಗಳು. ಜಿಇಎಂ ಪೋರ್ಟೆಲ್‍ನಲ್ಲಿ ಇವುಗಳ ಆಮದಿಗೆ ಅನುಮತಿ ಇಲ್ಲ ಎಂದು ಹೇಳಲಾಗಿದೆ. ಜಿಇಎಂ ಪೋರ್ಟೆಲ್‍ನಲ್ಲಿ ಪಾಕಿಸ್ತಾನ ಹಾಗೂ ಚೀನಾದ ಪೂರೈಕೆದಾರರು, ಉತ್ಪಾದಕರು, ಡೀಲರ್ ಗಳು ಮತ್ತು ಸರಕು ಹಾಗೂ ಸೇವೆಗಳ ಮಾರಾಟಗಾರರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ.
ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಡಿವಿಇಟಿ ನಿರ್ದೇಶಕ ದಿಗಂಬರ ದಲ್ವಿ ನಿರಾಕರಿಸಿದ್ದಾರೆ. ತಾಂತ್ರಿಕ ಸಮಿತಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಖರೀದಿ ಕಾರ್ಯಾದೇಶ ನೀಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಮಾರಾಟಗಾರರು ತೈವಾನ್ ನಿರ್ಮಿತ ಉತ್ಪನ್ನವನ್ನು ನೀಡುವುದಾಗಿ ಭರವಸೆ ನೀಡಿ ಚೀನಾ ಯಂತ್ರಗಳನ್ನು ನೀಡಿದ್ದಾರೆಯೇ ಎನ್ನುವುದು ತಿಳಿದಿಲ್ಲ. ಇದುವರೆಗೆ ಈ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.