ಬಿಜೆಪಿ ಸಂಸದನನ್ನು ‘ಫರ್ಜಿ ದುಬೆ’ ಎಂದ ಮಹುವಾ ಮೊಯಿತ್ರಾ: 2022ರ ಏರ್ಪೋರ್ಟ್ ಎಟಿಸಿ ಪ್ರಕರಣದ ತನಿಖೆಗೆ ಆಗ್ರಹ
ಹೊಸದಿಲ್ಲಿ, : ಬಿಜೆಪಿ ಸಂಸದ ನಿಶಿಕಾಂತ ದುಬೆ ವಿರುದ್ಧ ಮಂಗಳವಾರ ದಾಳಿಯನ್ನು ನಡೆಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ‘ಫರ್ಜಿ (ಬೋಗಸ್) ದುಬೆ ಎಂದು ಕರೆದಿದ್ದಾರೆ. ದುಬೆ ವಿರುದ್ಧದ 2022ರ ವಿಮಾನ ನಿಲ್ದಾಣ ಎಟಿಸಿ ಪ್ರಕರಣದ ತನಿಖೆಗೆ ಅವರು ಆಗ್ರಹಿಸಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಉದ್ಯಮಿ ದರ್ಶನ ಹಿರಾನಂದಿನಿ ಅವರಿಂದ ಲಂಚ ಪಡೆದಿದ್ದರು ಎಂದು ದುಬೆ ಆರೋಪಿಸಿದ್ದರು.
ದುಬೆ ತನ್ನ x ಹ್ಯಾಂಡಲ್ನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ ಅವರು ಬರೆದಿರುವ ಪತ್ರದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ವು ಲೋಕಸಭೆಯ ನೀತಿಸಂಹಿತೆ ಸಮಿತಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಲಿದೆ ಎಂದು ವೈಷ್ಣವ ಪತ್ರದಲ್ಲಿ ತಿಳಿಸಿದ್ದಾರೆ. ಮೊಯಿತ್ರಾರ ಪಾರ್ಲಿಮೆಂಟ್ ಲಾಗಿನ್ ಪಾಸ್ವರ್ಡ್ ಗಳು ದುಬೈನಲ್ಲಿ ಲಭ್ಯವಾಗಿದ್ದವು ಎಂಬ ಆರೋಪಗಳ ಬಗ್ಗೆ ಎನ್ಐಸಿ ತನಿಖೆಯನ್ನು ನಡೆಸುತ್ತಿದೆ.
ವೈಷ್ಣವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮೊಯಿತ್ರಾ,‘ನನ್ನ ವಿರುದ್ಧದ ತನಿಖೆಯಲ್ಲಿ ಬೆಂಬಲಿಸುವುದಾಗಿ ನಕಲಿ ಡಿಗ್ರಿವಾಲಾಗೆ ಭರವಸೆ ನೀಡಿರುವ ವೈಷ್ಣವ ಪತ್ರದ ಬಗ್ಗೆ ಕೇಳಲು ತುಂಬ ಮಜವಾಗಿದೆ. ಕಳೆದ ವರ್ಷ ಮಕ್ಕಳೊಂದಿಗೆ ವಿಮಾನ ನಿಲ್ದಾಣದ ಎಟಿಸಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ಫರ್ಜಿ ದುಬೆ ವಿರುದ್ಧ ಕೇಂದ್ರದ ತನಿಖೆಗಾಗಿ ಈಗಲೂ ಕಾಯುತ್ತಿದ್ದೇನೆ ’ ಎಂದು ತನ್ನ x ಪೋಸ್ಟ್ ನಲ್ಲಿ ಹೇಳಿದ್ದಾರೆ.
ದುಬೆಯವರನ್ನು ಒಳಗೊಂಡಿರುವ 2022ರ ಜಾರ್ಖಂಡ್ ದೇವಘಡ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಪ್ರಕರಣವನ್ನು ಮೊಯಿತ್ರಾ ಉಲ್ಲೇಖಿಸಿದ್ದಾರೆ. ಕಳೆದ ವರ್ಷದ ಆ.31ರಂದು ವಾಯು ಸಂಚಾರ ನಿಯಂತ್ರಣ (ಎಟಿಸಿ) ಪ್ರದೇಶವನ್ನು ಕಾನೂನುಬಾಹಿರವಾಗಿ ಪ್ರವೇಶಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ಒಂಭತ್ತು ಜನರಲ್ಲಿ ದುಬೆ ಮತ್ತು ಇನ್ನೋರ್ವ ಬಿಜೆಪಿ ಸಂಸದ ಮನೋಜ್ ತಿವಾರಿ ಅವರೂ ಸೇರಿದ್ದಾರೆ. ವಿಮಾನ ನಿಲ್ದಾಣದಲ್ಲಿ ರಾತ್ರಿ ಕಾರ್ಯಾಚರಣೆಗಳಿಗೆ ಅನುಮತಿ ಇಲ್ಲದಿದ್ದರೂ ದುಬೆ ಮತ್ತು ಸಂಗಡಿಗರು ಸೂರ್ಯಾಸ್ತದ ಬಳಿಕ ತಮ್ಮ ವಿಮಾನದ ನಿರ್ಗಮನಕ್ಕೆ ಬಲವಂತದಿಂದ ಅನುಮತಿ ಪಡೆದಿದ್ದರು.
ದುಮ್ಕಾದಲ್ಲಿ ಸಜೀವವಾಗಿ ದಹನಗೊಳಿಸಲಾಗಿದ್ದ ಅಪ್ರಾಪ್ತ ವಯಸ್ಕ ಬಾಲಕಿಯ ಕುಟುಂಬವನ್ನು ಭೇಟಿಯಾಗಿದ್ದ ದುಬೆ ಮತ್ತು ಸಂಗಡಿಗರು ದಿಲ್ಲಿಗೆ ಮರಳುತ್ತಿದ್ದಾಗ ಘಟನೆ ನಡೆದಿತ್ತು.