ಪ್ರತಿದಿನ ದೃಷ್ಟಿಮಾಂದ್ಯ, ಕಿವುಡರಿಗಾಗಿ ವಿಶೇಷ ವಾರ್ತಾಪ್ರಸಾರ ಮಾಡಿ : ಸರಕಾರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್

Update: 2024-08-13 14:52 GMT

ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ: ದೃಷ್ಟಿಮಾಂದ್ಯರಿಗೆ, ಕಿವುಡರಿಗೆ ಹಾಗೂ ಕೇಳಿಸಿಕೊಳ್ಳಲು ಕಷ್ಟವಾಗಿರುವವರಿಗೆ ಪ್ರತಿ ದಿನ ದೂರದರ್ಶನದಲ್ಲಿ ವಿಶೇಷ ವಾರ್ತಾ ಪ್ರಸಾರ ಮಾಡಿ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಈ ವಿಷಯದ ಕುರಿತು ಪ್ರಸಾರ ಭಾರತಿಯಿಂದ ನಿರ್ದೇಶನಗಳನ್ನು ಪಡೆಯುವಂತೆ ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ನ್ಯಾ. ಬಿ.ಆರ್.ಗವಾಯಿ ಹಾಗೂ ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಸೂಚಿಸಿತು.

ಅಕ್ಟೋಬರ್ 15, 1987ರಂದು ದೂರದರ್ಶನವು ಕಿವುಡರಿಗಾಗಿ ಪ್ರಪ್ರಥಮ ಸಾಪ್ತಾಹಿಕ ವಿಶೇಷ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತ್ತು.

ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ನ್ಯಾಯಾಲಯಕ್ಕೆ ಬರುವಂತೆ ಹೆಚ್ಚುವರಿ ಅಟಾರ್ನಿ ಜನರಲ್ ಅವರಿಗೆ ಸೂಚಿಸಿದ ನ್ಯಾಯಾಲಯವು, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿತು.

ಇದಲ್ಲದೆ ಕಿವುಡರು ಹಾಗೂ ಕೇಳಿಸಿಕೊಳ್ಳಲು ಕಷ್ಟವಾಗಿರುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆಯೂ ಭಾಟಿ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

ಕಿವುಡರು ಹಾಗೂ ಕೇಳಿಸಿಕೊಳ್ಳಲು ಕಷ್ಟವಾಗಿರುವವರಿಗಾಗಿ ಚಲನಚಿತ್ರಗಳು ಹಾಗೂ ಟಿವಿ ಸುದ್ದಿಗಳಲ್ಲಿ ಉಪ ಶೀರ್ಷಿಕೆಗಳನ್ನು ಪ್ರಸಾರ ಮಾಡಬೇಕು ಎಂದು ಕೋರಿ 2019ರಲ್ಲಿ ಸೇವಾ ದತ್ತಿ ಸಂಸ್ಥೆಯಾದ ಸಂಕೇತ್ ಫೌಂಡೇಶನ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News