23 ವರ್ಷಗಳ ಹೋರಾಟದ ಬಳಿಕ ದಾವೂದ್ ಇಬ್ರಾಹಿಂನ ಮುಂಬೈಯ ಸೊತ್ತು ಖರೀದಿಸಿದ ವ್ಯಕ್ತಿ
ಮುಂಬೈ: ಉತ್ತರಪ್ರದೇಶದ ಫಿರೋಝಾಬಾದ್ ಮೂಲದ ವ್ಯಕ್ತಿಯೋರ್ವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮಂಬೈಯ ಅಂಗಡಿಯೊಂದನ್ನು ಖರೀದಿಸಿದ್ದಾನೆ.
ದಾವೂದ್ ಇಬ್ರಾಹಿಂಗೆ ಸೇರಿದ ಈ ಸೊತ್ತನ್ನು ಖರೀದಿಸಲು ಹೇಮಂತ್ ಜೈನ್ (57) 23 ವರ್ಷಗಳ ಕಾಲ ಕಾನೂನು ಹಾಗೂ ಅಧಿಕಾರಶಾಹಿಗಳ ಅಡೆತಡೆಗಳನ್ನು ಎದುರಿಸಬೇಕಾಯಿತು.
ದಾವೂದ್ ಇಬ್ರಾಹಿಂ ಆಸ್ತಿ ಖರೀದಿದಾರರನ್ನು ಆಕರ್ಷಿಸುತ್ತಿಲ್ಲ ಎಂದು ಜೈನ್ ಪತ್ರಿಕೆಯೊಂದರಲ್ಲಿ ಓದಿದ್ದ. 2001 ಸೆಪ್ಟಂಬರ್‌ನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಹರಾಜಿನಲ್ಲಿ ನಾಗಪಾಡ ಪ್ರದೇಶದ ಜಯರಾಜ್ ಭಾ ಬೀದಿಯಲ್ಲಿರುವ 144 ಚದರ ಅಡಿ ಅಂಗಡಿಯನ್ನು 2 ಲಕ್ಷ ರೂ. ಪಾವತಿಸಿ ಖರೀದಿಸಿದ್ದರು ಎಂದು ವರದಿ ಹೇಳಿದೆ.
ಈ ಅಂಗಡಿಯ ಪ್ರಸಕ್ತ ಮಾರುಕಟ್ಟೆ ಬೆಲೆ 23 ಲಕ್ಷ ರೂ. ಎಂದು ಅವರು ತಿಳಿಸಿದ್ದಾರೆ.
ಜೈನ್ ಈ ಸೊತ್ತನ್ನು ಖರೀದಿಸಿದ ಬಳಿಕ ಅಧಿಕಾರಿಗಳು ಅವರನ್ನು ದಾರಿ ತಪ್ಪಿಸಿದ್ದರು. ಕೇಂದ್ರ ಮಾಲಕತ್ವದ ಸೊತ್ತುಗಳನ್ನು ವರ್ಗಾಯಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದರು. ಅಂತ ಯಾವುದೇ ನಿಷೇಧ ಜಾರಿಯಲ್ಲಿಲ್ಲ ಎಂದು ಅರಿವಾಗಲು ಅವರಿಗೆ ಸ್ಪಲ್ಪ ಸಮಯ ಬೇಕಾಯಿತು.
‘‘ನಾನು 12ಕ್ಕೂ ಅಧಿಕ ಪತ್ರಗಳನ್ನು ಪ್ರಧಾನ ಮಂತ್ರಿ ಅವರ ಕಚೇರಿಗೆ ಬರೆದೆ. ಕೆಲವೊಮ್ಮೆ ಪ್ರತಿಕ್ರಿಯೆ ಪಡೆದೆ. ಆದರೆ, ನೋಂದಣಿ ಪೂರ್ಣಗಳಿಸಲು ಸಾಧ್ಯವಾಗಲಿಲ್ಲ. ವಿಳಂಬವಾಗಲು ಮುಖ್ಯ ಕಾರಣ ಆದಾಯ ತೆರಿಗೆ ಇಲಾಖೆಯಲ್ಲಿ ಮೂಲ ಕಡತ ನಾಪತ್ತೆಯಾಗಿರುವುದು’’ ಎಂದು ಜೈನ್ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜೈನ್ ಮುಂಬೈ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ತಾನು ಆಸ್ತಿಯನ್ನು ಹರಾಜಿನಲ್ಲಿ ಖರೀದಿಸಿರುವುದರಿಂದ, ಅದರ ನೋಂದಣಿ ನ್ಯಾಯಸಮ್ಮತವಾಗಿ ನನ್ನ ಹೆಸರಿನಲ್ಲಿ ಇರಬೇಕು ಎಂದು ಅವರು ವಾದಿಸಿದ್ದರು. ಅನಂತರ ನ್ಯಾಯಾಲಯದ ಸೂಚನೆಯಂತೆ ಅವರು ಸ್ಟಾಂಪ್ ಸುಂಕ ಹಾಗೂ ದಂಡ 1.5 ಲಕ್ಷ ರೂ. ಪಾವತಿಸಿದ ಬಳಿಕ 2024 ಡಿಸೆಂಬರ್ 19ರಂದು ನೋಂದಣಿ ಪೂರ್ಣಗೊಳಿಸಿದ್ದರು.
ನ್ಯಾಯಾಲಯದಲ್ಲಿ ಜಯ ಗಳಿಸಿದ ಹೊರತಾಗಿಯೂ, ಜೈನ್ ಅವರ ತೊಂದರೆ ಮುಂದುವರಿದಿದೆ. ಈ ಅಂಗಡಿ ವರ್ಷಗಳಿಂದ ದಾವೂದ್ ಇಬ್ರಾಹಿಂ ವಶದಲ್ಲಿದೆ. ದಾವೂದ್ ಇಬ್ರಾಹಿಂ ಅದನ್ನು ತೆರವುಗೊಳಿಸಲು ಒಪ್ಪುತ್ತಿಲ್ಲ. ಹೇಮಂತ್ ಈಗ ಆ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.