"ಬಿಜೆಪಿಯ ವಿಭಜನವಾದಿ ರಾಜಕಾರಣದಿಂದಾಗಿ ಮಣಿಪುರ ಹೊತ್ತಿ ಉರಿಯುತ್ತಿದೆ": 500ಕ್ಕೂ ಅಧಿಕ ನಾಗರಿಕ ಸಂಘಟನೆಗಳ ಆಕ್ರೋಶ

Update: 2023-06-26 17:59 GMT

Photo: PTI 

ಶಿಲ್ಲಾಂಗ್: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ವಿಭಜನವಾದಿ ರಾಜಕೀಯದಿಂದಾಗಿ ಇಂದು ಮಣಿಪುರವು ಹೊತ್ತಿ ಉರಿಯುತ್ತಿರುವುದಾಗಿ 550 ಪೌರ ಸಂಘಟನೆಗಳು ಹಾಗೂ ಗಣ್ಯ ನಾಗರಿಕರು ಶುಕ್ರವಾರ ಆಪಾದಿಸಿದ್ದಾರೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ತಮ್ಮ ಗಾಢ ವೌನವನ್ನು ಮುರಿಯೇಕು ಹಾಗೂ ಪರಿಸ್ಥಿತಿಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕೆಂದು ಎಂದು ಸಂಘಟನೆಯು ಹೇಳಿಕೆಯೊಂದರಲ್ಲಿ ಕರೆ ನೀಡಿದೆ.

ಈಶಾನ್ಯ ರಾಜ್ಯವಾದ ಮಣಿಪುರವು ಮೇ 3ರಿಂದೀಚೆಗೆ ಮೈತೆ ಹಾಗೂ ಕುಕಿ ಸಮುದಾಯಗಳ ನಡುವೆ ಭೀಕರ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ.ಈ ಹಿಂಸಾಚಾರದಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿ 350 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಹೇಳಿಕೆ ತಿಳಿಸಿದೆ.

ನಾಗರಿಕ ಸ್ವಾತಂತ್ರಕ್ಕಾಗಿನ ಜನತಾ ಒಕ್ಕೂಟ (ಪಿಯುಸಿಎಲ್), ರಾಷ್ಟ್ರೀಯ ಜನ ಮೈತ್ರಿ ಚಳವಳಿ, ಭಗತ್ಸಿಂಗ್ ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘ ಹಾಗೂ ಅಖಿಲ ಭಾರತ ಅರಣ್ಯ ಶ್ರಮಿಕ ಜನತಾ ಒಕ್ಕೂಟ ಹಾಗೂ ರಾಜ್ಯ ಸಂಸದರಾದ ಮನೋಜ್ಕುಮಾರ್ ಝಾ, ಸಾಮಾಜಿಕ ಕಾರ್ಯಕರ್ತರಾದ ಕವಿತಾ ಶ್ರೀವಾಸ್ತವ, ಬೃಂದಾ ಆಡಿಗೆ, ಸೆಡ್ರಿಕ್ ಪ್ರಕಾಶ್, ಶಿಕ್ಷಣತಜ್ಞರಾದ ನಂದಿನಿ ಸುಂದರ್ , ಗೌಹರ್ ರಝಾ ಮತ್ತು ಪತ್ರಕರ್ತರಾದ ಆನಂದ್ ಪಟವರ್ಧನ್ ಹಾಗೂ ಜಾನ್ ದಯಾಳ್ ಹೇಳಿಕೆಗೆ ಸಹಿ ಹಾಕಿದ್ದಾರೆ.

ಬಿಜೆಪಿ ಸರಕಾರವು ಮೀಸಲು ಅರಣ್ಯ ಪ್ರದೇಶಗಳಿಂದ ‘ಅಕ್ರಮ ವಲಸಿಗ’ರೆನ್ನಲಾದವರನ್ನು ಘೋಷಿಸಿ ತೆರವುಗೊಳಿಸಲಾರಂಭಿಸಿದ ಬಳಿಕ ಮಣಿಪುರದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸರಕಾರವು ಅಕ್ರಮ ವಲಸಿಗರೆಂದು ಹೇಳಿಕೊಳ್ಳುತ್ತಿದ್ದರೂ, ಈ ಜನರು 1970ರಿಂದಲೂ ಮಣಿಪುರದಲ್ಲಿ ವಾಸವಾಗಿದ್ದರೆಂದು ಹೇಳಿಕೆಯು ತಿಳಿಸಿದೆ.

ದೇಶಾದ್ಯಂತ ಬಿಜೆಪಿಯು ಅನುಸರಿಸುತ್ತಿರುವ ಕಾರ್ಯತಂತ್ರದ ಹಾಗೆಯೇ ಮಣಿಪುರದಲ್ಲಿಯೂ ಅದು ತನ್ನ ರಾಜಕೀಯ ಲಾಭಕ್ಕಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿಕೆಯು ಆಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News