ಮಣಿಪುರ ಪರಿಸ್ಥಿತಿ: ಚರ್ಚೆಗೆ ನಕಾರ, ಸಂಸದೀಯ ಸಮಿತಿ ಸಭೆಯಿಂದ ಹೊರನಡೆದ ವಿಪಕ್ಷ ಸಂಸದರು
ಹೊಸದಿಲ್ಲಿ: ಮಣಿಪುರ ಪರಿಸ್ಥಿತಿ ಕುರಿತು ಚರ್ಚಿಸಬೇಕೆಂಬ ತಮ್ಮ ಬೇಡಿಕೆಯನ್ನು ಸಮಿತಿ ಅಧ್ಯಕ್ಷ ಬೃಜ್ಲಾಲ್ ಅವರು ನಿರಾಕರಿಸಿದ ಬಳಿಕ ಗುರುವಾರ ಡೆರೆಕ್ ಒ’ಬ್ರಿಯಾನ್ (ಟಿಎಂಸಿ), ದಿಗ್ವಿಜಯ ಸಿಂಗ್ ಮತ್ತು ಪ್ರದೀಪ್ ಭಟ್ಟಾಚಾರ್ಯ (ಕಾಂಗ್ರೆಸ್) ಸೇರಿದಂತೆ ಸಂಸದೀಯ ಸ್ಥಾಯಿ ಸಮಿತಿಯ ವಿಪಕ್ಷ ಸಂಸದರು ಸಭೆಯಿಂದ ಹೊರನಡೆದರು.
ಸಮಿತಿಯ ಸದಸ್ಯರಾಗಿ ಮಣಿಪುರದಲ್ಲಿಯ ಪರಿಸ್ಥಿತಿಯನ್ನು ತಾವು ಕಡೆಗಣಿಸುಂತಿಲ್ಲ ಎಂದು ವಿಪಕ್ಷ ನಾಯಕರು ಬೃಜ್ಲಾಲ ಅವರಿಗೆ ಪತ್ರಗಳನ್ನು ಸಲ್ಲಿಸಿದರು. ಈ ಮೊದಲೂ ಒ’ಬ್ರಿಯಾನ್ ಮತ್ತು ಸಿಂಗ್ ಮಣಿಪುರದಲ್ಲಿಯ ಪರಿಸ್ಥಿತಿಯನ್ನು ಚರ್ಚಿಸಲು ಸಭೆಯನ್ನು ಕರೆಯುವಂತೆ ಆಗ್ರಹಿಸಿ ಬೃಜ್ಲಾಲ್ ಅವರಿಗೆ ಪತ್ರವನ್ನು ಬರೆದಿದ್ದರು.
‘ಜೈಲುಗಳ ಸ್ಥಿತಿಗಳು,ಮೂಲಸೌಕರ್ಯ ಮತ್ತು ಸುಧಾರಣೆಗಳು ’ಕುರಿತು ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಸರಕಾರಗಳ ಜೊತೆ ಚರ್ಚೆಗಾಗಿ ಸಮಿತಿಯ ಸದಸ್ಯರು ಸಮಾವೇಶಗೊಂಡಿದ್ದರು. ಜೈಲುಗಳ ಸುಧಾರಣೆ ಕುರಿತು ಜುಲೈನಲ್ಲಿ ಮೂರು ಸಭೆಗಳು ನಿಗದಿಯಾಗಿರುವುದರಿಂದ ಮಣಿಪುರದಲ್ಲಿಯ ಪರಿಸ್ಥಿತಿಯ ಕುರಿತು ತುರ್ತು ಸಭೆಯನ್ನು ಕರೆಯಲು ಸಾಧ್ಯವಿಲ್ಲ ಎಂದು ತಿಳಿಸಿ ಸಮಿತಿಯ ಅಧ್ಯಕ್ಷರು ಉಭಯ ಸಂಸದರಿಗೆ ಪ್ರತ್ಯೇಕವಾಗಿ ತಿಳಿಸಿದ್ದರು. ಅಧ್ಯಕ್ಷರು ಸೇರಿದಂತೆ ಒಟ್ಟು ಏಳು ಸದಸ್ಯರು ಸಭೆಗೆ ಹಾಜರಾಗಿದ್ದರು.
ಈ ನಡುವೆ,ಮೊದಲ ಸರ್ವಪಕ್ಷ ಸಭೆಯು ಗೃಹಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷ ಸಭೆಯನ್ನು ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ ಅವರು,ಕಾನೂನು ಮತ್ತು ಸುವ್ಯವಸ್ಥೆ ಹಾಗೂ ತನ್ನ ಪ್ರಜೆಗಳ ಜೀವರಕ್ಷಣೆ ಯಾವುದೇ ರಾಜ್ಯ ಸರಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ವಿಫಲಗೊಂಡಿವೆ ಎಂದು ಆರೋಪಿಸಿದರು.
ಮೇ 3ರಿಂದ ಆರಂಭಗೊಂಡ ಜನಾಂಗೀಯ ಹಿಂಸಾಚಾರಗಳಿಂದ ತತ್ತರಿಸಿರುವ ಮಣಿಪುರದಲ್ಲಿ ಸುಮಾರು 120 ಜನರು ಮೃತಪಟ್ಟಿದ್ದು,3,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.