ಮಣಿಪುರ ಹಿಂಸಾಚಾರ: ಇಂಟರ್ನೆಟ್ ಸ್ಥಗಿತ, ಕರ್ಫ್ಯೂಗಳಿಂದಾಗಿ ಉದ್ಯಮಗಳಿಗೆ ಹೊಡೆತ
ಇಂಫಾಲ: ಕಳೆದೆರಡು ತಿಂಗಳುಗಳಿಂದ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚು ಕಡಿಮೆ ಸ್ಥಗಿತಗೊಂಡಿದ್ದು,ರಾಜ್ಯದ ಉದ್ಯಮ ಸಮುದಾಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಮೇ 3ರಿಂದ ಆರಂಭಗೊಂಡ ಹಿಂಸಾಚಾರವು ಸಮುದಾಯಗಳ ಭೇದವಿಲ್ಲದೆ ಎಲ್ಲ ವರ್ಗಗಳ ಜನರು ಮತ್ತು ಅವರ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ ಎಂದು ರಾಜ್ಯದಲ್ಲಿಯ ಹಲವಾರು ಉದ್ಯಮಿಗಳು ಹೇಳಿದ್ದಾರೆ.
ಈಶಾನ್ಯ ಭಾರತದ ಹೊರಗಿನ ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸುದೀರ್ಘ ಕಾಲದ ಸೇವೆಯ ಬಳಿಕ ಮಣಿಪುರಕ್ಕೆ ಮರಳಿರುವ ಕಾರ್ಪೊರೇಟ್ ನಾಯಕರು ತಮ್ಮ ತವರು ರಾಜ್ಯದಲ್ಲಿ ಸಮಯ ಮತ್ತು ಹಣ ಹೂಡಿಕೆ ಮಾಡುವ ತಮ್ಮದೇ ನಿರ್ಧಾರಗಳನ್ನು ಪ್ರಶ್ನಿಸಿಕೊಳ್ಳುತ್ತಿದ್ದಾರೆ.
‘ಹಿಂಸಾಚಾರವು ಬಹು ದೊಡ್ಡ ಪರಿಣಾಮವನ್ನು ಬೀರಿದೆ. ಸಮುದಾಯಗಳ ಭೇದವಿಲ್ಲದೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ 3ಕ್ಕೆ ಮುನ್ನ ಜೀವನ ಸಾಕಷ್ಟು ಚೆನ್ನಾಗಿತ್ತು. ಕಳೆದೆರಡು ವರ್ಷಗಳಿಂದ ನಾವು ಪ್ರಗತಿಯ ಪಥದಲ್ಲಿದ್ದೆವು. ನಾವು ಕೋವಿಡ್ ಪರಿಣಾಮದಿಂದ ಚೇತರಿಸಿಕೊಳ್ಳುತ್ತಿದ್ದಂತೆ ಉದ್ಯಮಗಳು ಹುಲುಸಾಗಿ ಬೆಳೆಯುತ್ತಿದ್ದವು,ಜನರ ದೈನಂದಿನ ಜೀವನ ಉತ್ತಮಗೊಳ್ಳುತ್ತಿತ್ತು.
ಇದೇ ವೇಳೆ ಇದು (ಜನಾಂಗೀಯ ಘರ್ಷಣೆ) ಸಂಭವಿಸಿತು. ಈಗ ನಮ್ಮ ಬದುಕುಗಳು ಬದಲಾಗಿವೆ,ಜನರು ವ್ಯವಹಾರಗಳನ್ನು ನಡೆಸುವ ರೀತಿಯು ಬದಲಾಗಿದೆ. ವಾಸ್ತವದಲ್ಲಿ ಈ ಬಿಕ್ಕಟ್ಟು ನಮ್ಮನ್ನು ಕೆಲವು ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ ’ ಎಂದು ಆ್ಯಡ್ಬಲ್ ಸೊಲ್ಯೂಷನ್ಸ್ ಪ್ರೈ.ಲಿ.ನ ಸ್ಥಾಪಕ ವೈಖಂಬಾ ನಿಂಗ್ತೊಮ್ ಚಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಸಾರಿಗೆಯಿಲ್ಲ, ಇಂಟರ್ನೆಟ್ ಇಲ್ಲ, ಇಂಟರ್ನೆಟ್ ಇಲ್ಲದೆ ನಾವು ಹಣವನ್ನು ವರ್ಗಾಯಿಸುವುದು ಹೇಗೆ? ಸಾರಿಗೆಯಿಲ್ಲದೆ ಯಾವುದೇ ಮೂಲಭೂತ ಅಭಿವೃದ್ಧಿ ಸಾಧ್ಯವಿಲ್ಲ. ಅಂದರೆ ಪ್ರಗತಿಯು ಶೂನ್ಯವಾಗಿದೆ ’ಎಂದು ಇಂಫಾಲ ಪಶ್ಚಿಮ ಜಿಲ್ಲೆಯ ಸ್ಟಾಕ್ ಬ್ರೋಕರ್ ಎನ್.ಸಂದೀಪ್ ಮೈತೆಯಿ ಹತಾಶೆಯನ್ನು ವ್ಯಕ್ತಪಡಿಸಿದರು.