ಮಣಿಪುರ ಹಿಂಸಾಚಾರ, ಒಡಿಶಾ ರೈಲು ಅಪಘಾತ: ಸಂಸತ್ತಿನಲ್ಲಿ ಕೇಂದ್ರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಕಾಂಗ್ರೆಸ್ ಯೋಜನೆ
ಹೊಸದಿಲ್ಲಿ: ಸಂಸತ್ತಿನ ಮಳೆಗಾಲದ ಅಧಿವೇಶನವು ಜು.20ರಂದು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಗುಂಪು ಶನಿವಾರ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಸಭೆ ಸೇರಿ, ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಜನೆಯನ್ನು ಚರ್ಚಿಸಿತು.
‘ದೇಶದ ಮುಂದೆ ಪ್ರಮುಖ ಸಾರ್ವಜನಿಕ ವಿಷಯಗಳಿವೆ,ಹೀಗಾಗಿ ಮಳೆಗಾಲದ ಅಧಿವೇಶನದ 20 ದಿನಗಳ ಮೊದಲೇ ಸಭೆಯನ್ನು ನಡೆಸಿದ್ದೇವೆ. ಈ ವಿಷಯಗಳ ಕುರಿತು ನಮ್ಮ ಕಾರ್ಯತಂತ್ರವು ಏನಾಗಿರಬೇಕು ಮತ್ತು ಈ ವಿಷಯಗಳನ್ನು ಸಂಸತ್ತಿನಲ್ಲಿ ಹೇಗೆ ಎತ್ತಬೇಕು ಎನ್ನುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಾಯಿಸುವುದನ್ನು ಕಾಂಗ್ರೆಸ್ ಮುಂದುವರಿಸಲಿದೆ. ಮಣಿಪುರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಬಿಜೆಪಿ ಹೈಕಮಾಂಡ್ಗೆ ಯಾವುದೇ ನಿಯಂತ್ರಣವಿಲ್ಲ ಎನ್ನುವುದನ್ನು ಶುಕ್ರವಾರದ ಮುಖ್ಯಮಂತ್ರಿ ರಾಜೀನಾಮೆ ನಾಟಕವು ತೋರಿಸಿದೆ. ಗೃಹಸಚಿವರು ಮಣಿಪುರಕ್ಕೆ ಭೇಟಿ ನೀಡಿದ್ದರಾದರೂ ಯಾವುದೇ ಧನಾತ್ಮಕ ಫಲಿತಾಂಶ ಕಂಡು ಬಂದಿಲ್ಲ. ಕಳೆದ 60 ದಿನಗಳಿಂದಲೂ ಹಿಂಸಾಚಾರ ನಡೆಯುತ್ತಿದ್ದರೂ ಪ್ರಧಾನಿ ತುಟಿಪಿಟಕ್ಕೆಂದಿಲ್ಲ ಎಂದು ಹೇಳಿದ ರಮೇಶ್, ಈ ವಿಷಯದಲ್ಲಿ ತನ್ನ ಮೌನವನ್ನು ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು. ಮಣಿಪುರ ಅಶಾಂತಿ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಕಾಂಗ್ರೆಸ್ ಆಗ್ರಹಿಸಲಿದೆ ಎಂದರು.
ಸಂಸತ್ತಿನಿಂದ ರಾಹುಲ್ ಗಾಂಧಿಯವರ ಅನರ್ಹತೆ ಮತ್ತು ಒಡಿಶಾ ರೈಲು ಅಪಘಾತದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದ ರಮೇಶ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ರಾಜೀನಾಮೆಗೆ ಒತ್ತಾಯಿಸಿದರು. ಮೋದಿಯವರು ವಂದೇ ಭಾರತ ರೈಲುಗಳ ಉದ್ಘಾಟನೆಗೆ ನೀಡುವಷ್ಟೇ ಮಹತ್ವವನ್ನು ರೈಲು ಸುರಕ್ಷತೆಗೂ ನೀಡಬೇಕು ಎಂದರು.
ಅದಾನಿ ಕುರಿತು ಜೆಪಿಸಿ ತನಿಖೆಗೂ ಪಕ್ಷವು ಆಗ್ರಹಿಸಲಿದೆ ಮತ್ತು ಪ್ರತಿಭಟನಾನಿರತ ಕುಸ್ತಿಪಟುಗಳನ್ನು ದಿಲ್ಲಿ ಪೊಲೀಸರು ನಡೆಸಿಕೊಂಡ ರೀತಿಯನ್ನೂ ಸಂಸತ್ತಿನಲ್ಲಿ ಪ್ರಸ್ತಾಪಿಸಲಿದೆ ಎಂದರು. ಏಕರೂಪ ನಾಗರಿಕ ಸಂಹಿತೆ (UCC)ಯ ಕರಡು ರಚನೆಗೆ ಆಗ್ರಹಿಸಿ ಜೂ.15ರಂದು ನೀಡಿದ್ದ ಹೇಳಿಕೆಗೆ ಪಕ್ಷವು ಬದ್ಧವಾಗಿದೆ ಎಂದೂ ರಮೇಶ ತಿಳಿಸಿದರು.