ಓಂ ಬಿರ್ಲಾ ಕೊಠಡಿಯಲ್ಲಿ ಆಡಳಿತ-ವಿಪಕ್ಷ ನಾಯಕರ ಸಭೆ: ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಭಾಗಿ
Update: 2024-08-10 11:50 GMT
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಭಾವಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 18ನೇ ಲೋಕಸಭೆಯ ಎರಡನೆ ಅಧಿವೇಶನ ಮುಕ್ತಾಯಗೊಂಡ ನಂತರ, ಈ ಇಬ್ಬರು ನಾಯಕರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ನಡೆದ ಸಭೆಯೊಂದರಲ್ಲಿ ಒಟ್ಟಿಗೆ ಹಾಜರಾಗಿದ್ದರು.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಲೋಕಸಭೆಯು ಹಂಚಿಕೊಂಡಿರುವ ಭಾವಚಿತ್ರದಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಇಬ್ಬರೂ ಓಂ ಬಿರ್ಲಾರೊಂದಿಗೆ ಕುಳಿತಿರುವುದು ಸೆರೆಯಾಗಿದೆ.
ಈ ಸಭೆಯಲ್ಲಿ ಅಮಿತ್ ಶಾ, ರಾಜ್ ನಾಥ್ ಸಿಂಗ್, ಕಿರೆನ್ ರಿಜಿಜು ಹಾಗೂ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.
ಇವರೊಂದಿಗೆ ಕಿಂಜರಾಪು ರಾಮ್ ಮೋಹನ್ ನಾಯ್ಡು, ಚಿರಾಗ್ ಪಾಸ್ವಾನ್, ಪಿಯೂಷ್ ಗೋಯಲ್, ಸುದೀಪ್ ಬಂಡೋಪಾಧ್ಯಾಯ ಹಾಗೂ ಕನಿಮೋಳಿ ಕೂಡಾ ಸಭೆಯಲ್ಲಿ ಉಪಸ್ಥಿತರಿದ್ದರು.
ಶುಕ್ರವಾರ ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನಗಳೆರಡನ್ನೂ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ.