ಮಹಾರಾಷ್ಟ್ರದಲ್ಲಿ ಪದೇ ಪದೇ ಚುನಾವಣಾ ರ್‍ಯಾಲಿ ನಡೆಸುತ್ತಿರುವ ಮೋದಿ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ: ಶರದ್ ಪವಾರ್

Update: 2024-05-20 03:41 GMT

 ಶರದ್ ಪವಾರ್ | Photo: PTI 

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದಲ್ಲಿ ಪದೇ ಪದೇ ಚುನಾವಣಾ ರ್‍ಯಾಲಿ ನಡೆಸುತ್ತಿದ್ದು, ಇದು ಅವರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನುವುದರ ಸಂಕೇತ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ. ಈ ಕಾರಣದಿಂದ ಅವರು ಮಹಾರಾಷ್ಟ್ರದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಈ ಹಿಂದೆ ಜವಾಹರ್ಲಾಲ್ ನೆಹರೂ, ಇಂದಿರಾಗಾಂಧಿಯಂಥ ಮಾಜಿ ಪ್ರಧಾನಿಗಳು ಕೇವಲ ಒಂದು ಅಥವಾ ಎರಡು ರ್‍ಯಾಲಿಗಳನ್ನಷ್ಟೇ ನಡೆಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು, "ಪ್ರಸಕ್ತ ಚುನಾವಣೆಯಲ್ಲಿ ಮಹಾರಾಷ್ಟ್ರ ವಿಕಾಸ ಅಗಾಡಿ ಕನಿಷ್ಠ ಶೇಕಡ 50ರಷ್ಟು ಸ್ಥಾನಗಳನ್ನು ಪಡೆಯಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮಹಾರಾಷ್ಟ್ರ ಪ್ರಚಾರದ ವೇಳೆ ಬಳಸುವ ಭಾಷೆ ಅಚ್ಚರಿ ತಂದಿದೆ. ಆಘಾತಕಾರಿ ಎಂದರೆ ನನ್ನನ್ನು ಅತಂತ್ರ ಆತ್ಮ ಎಂದು ಕರೆದಿದ್ದಾರೆ. ಶಿವಸೇನೆ (ಯುಬಿಟಿ)ಯನ್ನು ನಕಲಿ ಎಂದು ಕರೆದಿದ್ದಾರೆ. ಆ ಹುದ್ದೆಯ ಘನತೆಯನ್ನು ಇಳಿಸಿದ್ದಾರೆ. ಮೋದಿ ಹೇಳಿಕೆಗಳಿಂದ ನಾವೇನೂ ಅಧೀರರಾಗಿಲ್ಲ" ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಕೂಡಾ ಅಣ್ಣಾ ಹಜಾರೆ ಮತ್ತು ಮಾಜಿ ಬಿಎಂಸಿ ಅಧಿಕಾರಿ ಜಿ.ಆರ್.ಖೈರ್ನರ್ ಅವರು ನನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಈಗ ಅವರ ಚಲನ ವಲನಗಳ ಬಗ್ಗೆ ಪತ್ತೆಯೂ ಇಲ್ಲ ಎಂದು ಛೇಡಿಸಿದರು.

ವಿರೋಧ ಪಕ್ಷಗಳು ಮುಖಂಡರ ಮಕ್ಕಳಿಗೆ ಮಣೆಹಾಕಿವೆ ಎಂಬ ಮೋದಿ ಟೀಕೆಯ ಬಗ್ಗೆ ಕೇಳಿದಾಗ, "ತಂದೆ ತಾಯಿಯ ಹಾದಿಯಲ್ಲಿ ಮಕ್ಕಳು ಮುನ್ನಡೆಯುವುದು ಅಪರಾಧವಲ್ಲ. ಹಲವು ಮಂದಿ ವೈದ್ಯರು ತಮ್ಮ ಮಕ್ಕಳು ವೈದ್ಯಕೀಯ ವೃತ್ತಿ ಕೈಗೊಳ್ಳಬೇಕು ಎಂದು ಬಯಸುತ್ತಾರೆ. ರಾಜಕೀಯದಲ್ಲೂ ಹೀಗೆ ಆಗುತ್ತದೆ. ಎಲ್ಲವೂ ಅವರ ವೃತ್ತಿಪರ ನೈಪುಣ್ಯವನ್ನು ಅವಲಂಬಿಸಿರುತ್ತದೆ. ಅವರಿಗೆ ಚಾಣಾಕ್ಷತನ ಇದ್ದರೆ ಜೀವನದಲ್ಲಿ ಮುಂದೆ ಬರುತ್ತಾರೆ. ಪ್ರತಿಯೊಂದೂ ಅವರ ಸಾಮರ್ಥ್ಯ ಹಾಗೂ ವೃತ್ತಿಪರತೆಯನ್ನು ಅವಲಂಬಿಸಿರುತ್ತದೆ" ಎಂದು ಸಮರ್ಥಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News