ಬಿಜೆಪಿ ಸಚಿವನ ಬಗ್ಗೆ ವರದಿ ಮಾಡಿದ ಪತ್ರಕರ್ತನ ವಿರುದ್ಧ 11 ಎಫ್ಐಆರ್

Update: 2023-10-14 17:08 GMT

ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಬೆ ಚುನಾವಣೆ ನಡೆಯಲಿರುವಂತೆಯೇ, ರಾಜ್ಯದ ಬಿಜೆಪಿ ಸರಕಾರದ ಸಚಿವರೊಬ್ಬರನ್ನು ಪರೋಕ್ಷವಾಗಿ ಉಲ್ಲೇಖಿಸಿ ವರದಿಯೊಂದನ್ನು ಬರೆದಿದ್ದಕ್ಕಾಗಿ ಮಧ್ಯಪ್ರದೇಶದ ಪತ್ರಕರ್ತರೊಬ್ಬರ ವಿರುದ್ಧ 11 ಎಫ್ ಐ ಆರ್ ಗಳನ್ನು ಶನಿವಾರ ದಾಖಲಿಸಲಾಗಿದೆ.

ಪಂಚಾಯತ್ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ, ಮಹಿಳೆಯೊಬ್ಬಳ ಜೊತೆಗಿದ್ದರೆನ್ನಲಾದ ವಿವಾದಿತ ವೀಡಿಯೊದ ಬಗ್ಗೆ ದೈನಿಕ್ ಖುಲಾಸಾ ಪತ್ರಿಕೆಯ ವರದಿಗಾರ ಜಲಂ ಸಿಂಗ್ ಕಿರಾರ್ ಅವರು ಸೆ. 7ರಂದು ವರದಿ ಮಾಡಿದ್ದರು. ಆದರೆ ಸಿಂಗ್, ವರದಿಯಲ್ಲಿ ಸಿಸೋಡಿಯಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ವಿವಾದಿತ ವೀಡಿಯೊ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜಕಾರಣಿಯೊಬ್ಬರಿಗೆ ಗುನಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂದು ಬರೆದಿದ್ದರು.

ಇದರ ಬೆನ್ನಲ್ಲೇ ಪತ್ರಕರ್ತ ಸಿಂಗ್ ವಿರುದ್ಧ 11 ಎಫ್ ಐ ಆರ್ ಗಳು ದಾಖಲಾಗಿವೆ. ಬ್ಲಾಕ್ ಮೇಲ್, ಸುಲಿಗೆ, ಫೋರ್ಜರಿ ಇತ್ಯಾದಿ ಆರೋಪಗಳಿಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಿಂಗ್ ಅವರು ತನ್ನ ವರದಿಯಲ್ಲಿ ಯಾವುದೇ ರಾಜಕಾರಣಿಯ ಹೆಸರು ಉಲ್ಲೇಖಿಸಿಲ್ಲ. ಆದರೂ ಸಚಿವರೊಬ್ಬರು, ಸಿಂಗ್ ವಿರುದ್ಧ ಇತರಿಂದ ಬಹುಸಂಖ್ಯೆಯ ದೂರುಗಳು ದಾಖಲಾಗುವಂತೆ ಮಾಡಿದ್ದಾರೆ ಹಾಗೂ ಅದಕ್ಕಾಗಿ ಆಡಳಿತದ ಮೇಲೆ ಒತ್ತಡ ಹೇರಿದ್ದಾರೆ ಎಂದು ದೈನಿಕ ಖುಲಾಸಾದ ಸಂಪಾದಕ ಸುರೇಶ್ ಆಚಾರ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News