ಎಂ.ಎಸ್. ಧೋನಿಯ ನಂ.7 ಜೆರ್ಸಿ ನಿವೃತ್ತಿಗೊಳಿಸಿದ ಬಿಸಿಸಿಐ: ವರದಿ

Update: 2023-12-15 16:00 GMT

M.S. Dhoni | PHOTO: PTI 

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ವಿಶ್ವಕಪ್ ವಿಜೇತ ನಾಯಕ ಎಂ.ಎಸ್. ಧೋನಿಗೆ ಗೌರವ ಸಲ್ಲಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಧೋನಿ ಧರಿಸುತ್ತಿದ್ದ 7ನೇ ಕ್ರಮಾಂಕದ ಜೆರ್ಸಿಯನ್ನು ನಿವೃತ್ತಿಗೊಳಿಸಲು ನಿರ್ಧರಿಸಿದೆ. 7ನೇ ಕ್ರಮಾಂಕದ ಜೆರ್ಸಿಯು ಇನ್ನು ಮುಂದೆ ಯಾವ ಆಟಗಾರನಿಗೂ ಲಭ್ಯವಿರುವುದಿಲ್ಲ ಎಂದು ವರದಿಯಾಗಿದೆ.

ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನೆಂಬ ದಾಖಲೆಯನ್ನು ಈಗಲೂ ತನ್ನಲ್ಲೇ ಉಳಿಸಿಕೊಂಡಿರುವ ಧೋನಿಗೆ ನಂ.7ನೇ ಜರ್ಸಿ ಮೀಸಲಿಡಲಾಗಿದೆ. ಸಚಿನ್ ತೆಂಡುಲ್ಕರ್ ಅವರ 10ನೇ ಕ್ರಮಾಂಕದ ಶರ್ಟ್ ಅನ್ನು ಈಗಾಗಲೇ ಬಿಸಿಸಿಐ ನಿವೃತ್ತಿಗೊಳಿಸಿದೆ. ಭಾರತ ಕ್ರಿಕೆಟ್ ತಂಡಕ್ಕೆ ವಿಕೆಟ್‌ ಕೀಪರ್-ಬ್ಯಾಟರ್ ಧೋನಿ ನೀಡಿರುವ ಕೊಡುಗೆಯನ್ನು ಗೌರವಿಸಿ ಅವರ ನಂ.7 ಶರ್ಟ್ ಅನ್ನು ಕೂಡ ನಿವೃತ್ತಿಯ ಪಟ್ಟಿಗೆ ಸೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.

ಕ್ರೀಡೆಗೆ ವಿಶ್ವಕಪ್ ವಿಜೇತ ಧೋನಿ ಅವರ ಕೊಡುಗೆಯ ಗೌರವಾರ್ಥ ಧೋನಿ ಧರಿಸುತ್ತಿದ್ದ 7ನೇ ಸಂಖ್ಯೆಯ ಜೆರ್ಸಿಯನ್ನು ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

2020ರ ಆಗಸ್ಟ್ 15 ರಂದು ಎಂ.ಎಸ್. ಧೋನಿ ಅಂತರ್‌ ರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿಯಾಗಿದ್ದರು. ಅಂತರ್‌ ರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿಯಾಗಿ ಮೂರು ವರ್ಷ ಕಳೆದಿದ್ದರೂ ಫ್ರಾಂಚೈಸಿ ಕ್ರಿಕೆಟ್‌ ನಲ್ಲಿ ಧೋನಿ ಈಗಲೂ ಸಕ್ರಿಯರಾಗಿದ್ದಾರೆ. ಮುಂಬರುವ ಐಪಿಎಲ್ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವಹಿಸಲು ಸಜ್ಜಾಗಿದ್ದಾರೆ.

ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಧರಿಸುತ್ತಿದ್ದ ನಂ.10 ಜೆರ್ಸಿಯನ್ನು 2017ರಲ್ಲಿ ಬಿಸಿಸಿಐ ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು.

ಧೋನಿ(7) ಹಾಗೂ ತೆಂಡುಲ್ಕರ್(10) ಧರಿಸಿರುವ ಜೆರ್ಸಿ ಸಂಖ್ಯೆಯನ್ನು ಇನ್ನು ಮುಂದೆ ಚೊಚ್ಚಲ ಪಂದ್ಯ ಆಡುವ ಆಟಗಾರರು ಸೇರಿದಂತೆ ಯಾರಿಗೂ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ತನ್ನ ನಿರ್ಧಾರದ ಕುರಿತು ರಾಷ್ಟ್ರೀಯ ತಂಡಕ್ಕೆ ತಿಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News