ಮುಂಬೈ ಹೋರ್ಡಿಂಗ್ ದುರಂತ: ಇನ್ನೂ ಮುಗಿಯದ ಅವಶೇಷಗಳ ತೆರವು ಕಾರ್ಯ

Update: 2024-05-17 15:43 GMT

PC : PTI 

ಮುಂಬೈ :ಮುಂಬೈನ ಘಾಟಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿದ್ದ ಬೃಹತ್ ಜಾಹೀರಾತು ಫಲಕದಡಿ ಸಿಲುಕಿ ಹಾನಿಗೀಡಾಗಿರುವ 73 ವಾಹನಗಳನ್ನು ಹೊರತೆಗೆಯಲಾಗಿದೆ. ಸ್ಥಳದಲ್ಲಿ ರಾಶಿ ಬಿದ್ದಿರುವ ನಜ್ಜುಗುಜ್ಜಾದ ಲೋಹಗಳ ಅವಶೇಷಗಳು 16 ಜೀವಗಳನ್ನು ಬಲಿ ತೆಗೆದುಕೊಂಡ ಈ ಭೀಕರ ದುರಂತಕ್ಕೆ ಸಾಕ್ಷಿಯನ್ನು ಹೇಳುತ್ತಿವೆ.

ದುರಂತ ಸ್ಥಳದಲ್ಲಿ 66 ಗಂಟೆಗಳ ಸುದೀರ್ಘ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಗುರುವಾರ ಬೆಳಿಗ್ಗೆ ಅಂತ್ಯಗೊಂಡಿದೆ. ಆದರೆ ಗುಡ್ಡೆ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಲು ಕಾರ್ಮಿಕರು ಮತ್ತು ಯಂತ್ರಗಳು ಕಳೆದ ನಾಲ್ಕು ದಿನಗಳಿಂದಲೂ ಅವಧಿ ಮೀರಿ ಶ್ರಮಿಸುತ್ತಿದ್ದಾರೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ಆಯುಕ್ತ ಭೂಷಣ ಗಗ್ರಾನಿ ಪ್ರಕಟಿಸಿದರು.

ಸೋಮವಾರ ಸಂಜೆ ಧೂಳು ಬಿರುಗಾಳಿ ಮತ್ತು ಭಾರೀ ಮಳೆಯ ಸಂದರ್ಭದಲ್ಲಿ ಬೃಹತ್ ಗಾತ್ರದ ಜಾಹೀರಾತು ಫಲಕ ಸಮೀಪದ ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿದ್ದು.ವಾಹನಗಳೊಂದಿಗೆ ಜನರೂ ಅದರಡಿ ಸಿಕ್ಕಿಕೊಂಡಿದ್ದರು. 16 ಜನರು ಮೃತಪಟ್ಟಿದ್ದು,75 ಜನರು ಗಾಯಗೊಂಡಿದ್ದಾರೆ.

30 ದ್ವಿಚಕ್ರ,31 ಚತುಷ್ಚಕ್ರ ವಾಹನಗಳು,ಎಂಟು ಆಟೋರಿಕ್ಷಾಗಳು ಮತ್ತು ಎರಡು ಘನ ವಾಹನಗಳು ಸೇರಿದಂತೆ ಹಾನಿಗೀಡಾದ ಒಟ್ಟು 73 ವಾಹನಗಳನ್ನು ಅವಶೇಷಗಳಡಿಯಿಂದ ಹೊರಕ್ಕೆ ತೆಗೆಯಲಾಗಿದೆ. ಅವುಗಳನ್ನು ಅವುಗಳ ಮಾಲಿಕರಿಗೆ ಒಪ್ಪಿಸಲು ಪೋಲಿಸರಿಗೆ ಹಸ್ತಾಂತರಿಸಲಾಗಿದೆ ಎಂದು ಬಿಎಂಸಿ ಅಧಿಕಾರಿಯೋರ್ವರು ತಿಳಿಸಿದರು.

ಪೆಟ್ರೋಲ್ ಪಂಪ್ನಲ್ಲಿ ಇಂಧನ ದಾಸ್ತಾನು ಇರುವುದರಿಂದ ಅಗ್ನಿಶಾಮಕ ದಳವು ಈಗಲೂ ಸ್ಥಳದಲ್ಲಿ ಮೂರು ಅಗ್ನಿಶಾಮಕ ಯಂತ್ರಗಳು ಮತ್ತು ಕೆಲವು ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News