ಮುಂಬೈ: ವಿದ್ಯಾರ್ಥಿನಿಯ ಅತ್ಯಾಚಾರ ಆರೋಪ
ಮುಂಬೈ: ಇಲ್ಲಿನ ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್ (BARC)ನ ಕ್ವಾರ್ಟರ್ಸ್ ನಲ್ಲಿ ಲಘು ಪಾನೀಯಕ್ಕೆ ಮತ್ತು ಬರಿಸುವ ಔಷಧ ಬೆರೆಸಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಈ ಘಟನೆ ಚೆಂಬೂರು ಪೋಸ್ಟಲ್ ಕಾಲನಿ ಪ್ರದೇಶದಲ್ಲಿ ಬುಧವಾರ ತಡ ರಾತ್ರಿ ಸಂಭವಿಸಿದೆ. ಬಿಎಆರ್ಸಿಯ ಉದ್ಯೋಗಿಯಾಗಿರುವ ತಂದೆ ಹಾಗೂ ಕುಟುಂಬದ ಇತರ ಸದಸ್ಯರು ಮನೆಯಲ್ಲಿಲ್ಲದ ಸಂದರ್ಭ ಯುವತಿಯ ಮೇಲೆ ಈ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇವರಲ್ಲಿ 26 ವರ್ಷದ ಓರ್ವ ಆರೋಪಿ ಬಿಎಆರ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾನೆ. ಒಂದೇ ಕಟ್ಟಡದಲ್ಲಿ ವಾಸಿಸುತ್ತಿರುವುದರಿಂದ ಆತ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ.
ಯುವತಿಯ ಕುಟುಂಬದ ಸದಸ್ಯರು ಮನೆಯಲ್ಲಿ ಇಲ್ಲದ ಸಂದರ್ಭ ಆತ ತನ್ನ ಗೆಳೆಯನನ್ನು ಮನೆಗೆ ಕರೆಸಿಕೊಂಡಿದ್ದಾನೆ. ತನಗೆ ಮನೆಯಿಂದ ಇಂಡಕ್ಷನ್ ಕುಕ್ಕರ್ ತಂದು ಕೊಡುವಂತೆ ಯುವತಿಯಲ್ಲಿ ವಿನಂತಿಸಿದ್ದಾನೆ. ಯುವತಿ ಆರೋಪಿಯ ಮನೆಗ ಬಂದಾಗ ಆಕೆಗೆ ಲಘು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ನೀಡಿದ್ದಾನೆ. ಆಕೆ ಪ್ರಜ್ಞೆ ಕಳೆದುಕೊಂಡಾಗ ಇಬ್ಬರೂ ಆಕೆಯ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.
ಮರು ದಿನ ಮುಂಜಾನೆ ಪ್ರಜ್ಞೆ ಬಂದ ಬಳಿಕ ಆಕೆ ಘಟನೆಯನ್ನು ನೆರೆಯವರಿಗೆ ಹಾಗೂ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ಅಲ್ಲದೆ ಚೆಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿರುವ ಪೊಲೀಸರು 26 ವರ್ಷದ ಯುವಕ ಹಾಗೂ ಆತನ 30 ವರ್ಷದ ಗೆಳೆಯನನ್ನು ಬಂಧಿಸಿದ್ದಾರೆ.