ಹೇಮಂತ್ ಕರ್ಕರೆ ಕುರಿತ ವಿಡಿಯೊ: ಮೂರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲು
ಮುಂಬೈ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತ ವಿಡಿಯೊ ಹಂಚುವ ಮೂಲಕ ಎರಡು ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪದಲ್ಲಿ ನವಿ ಮುಂಬೈ ಪೊಲೀಸರು ಮೂವರು ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವ ನವಿ ಮುಂಬೈನ ಟುರ್ಭೆ ನಿವಾಸಿಯಾದ ರಾಮ ಗಾಯಕ್ವಾಡ್ (49) ಎಂಬ ವ್ಯಕ್ತಿಯು, ಆರೋಪಿಗಳು 'ಹೇಮಂತ್ ಕರ್ಕರೆಗೆ ವಂದನೆಗಳು (ನೈಜ ಕತೆ ಆಧಾರಿತ)' ಎಂಬ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ನಾನದನ್ನು ಎಪ್ರಿಲ್ 22ರಂದು ನೋಡಿದೆ ಎಂದು ಆರೋಪಿಸಿದ್ದಾರೆ.
ಆರೋಪಿಗಳು ಅದು ನೈಜ ಕತೆಯೇನೋ ಎಂಬಂತೆ ವಿಡಿಯೊವನ್ನು ಪ್ರಸ್ತುತ ಪಡಿಸಿದ್ದು, ಆ ವಿಡಿಯೊದಲ್ಲಿ ತಪ್ಪು ಮಾಹಿತಿಗಳನ್ನು ಆಧರಿಸಿ ಬ್ರಾಹ್ಮಣರು ಭಯೋತ್ಪಾದಕ ದಾಳಿಗಿಳಿಯುತ್ತಾರೆ ಹಾಗೂ ಮುಸ್ಲಿಮರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಾರೆ ಎಂದು ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ ಎಂದು ಬುಧವಾರ ದೂರನ್ನು ಉಲ್ಲೇಖಿಸಿ ಟುರ್ಭೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದರಿ ದೂರನ್ನು ಆಧರಿಸಿ ಬುಧವಾರ ಮೂವರು ವ್ಯಕ್ತಿಗಳು ಹಾಗೂ ಅವರ ತಂಡದ ಅನಾಮಧೇಯ ಸದಸ್ಯರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153-ಎ (ಎರಡು ವಿಭಿನ್ನ ಗುಂಪುಗಳ ನಡುವೆ ದ್ವೇಷ ಪ್ರಚೋದಿಸುವುದು), 295-ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳಿಗೆ ಅಪಮಾನವೆಸಗುವಂತೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿರುವ ಉದ್ದೇಶಪೂರ್ವಕ ಹಾಗೂ ದುರುದ್ದೇಶದ ಕೃತ್ಯ), 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟಾಗುವಂತೆ ಉದ್ದೇಶಪೂರ್ವಕವಾಗಿ ಭಾಷೆ ಬಳಸುವುದು) ಹಾಗೂ 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ಮಂದಿ ಸೇರಿಕೊಂಡು ಮಾಡಿದ ಕೃತ್ಯಗಳು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2008ರಲ್ಲಿ ನಡೆದಿದ್ದ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹೇಮಂತ್ ಕರ್ಕರೆ ಹುತಾತ್ಮರಾಗಿದ್ದರು.