ಈಡಿಯಿಂದ ಜಾರ್ಖಂಡ್ ಮುಖ್ಯಮಂತ್ರಿಗೆ ಹೊಸ ಸಮನ್ಸ್
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯ (ಈಡಿ)ವು ಸೋಮವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಗೆ ಹೊಸ ಸಮನ್ಸ್ ನೀಡಿದೆ.
ರಾಂಚಿಯಲ್ಲಿರುವ 7.16 ಎಕರೆ ಜಮೀನಿಗೆ ಸಂಬಂಧಿಸಿ ನಡೆದಿದೆಯೆನ್ನಲಾದ ಭೂಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸೇನಾ ಜಮೀನಿನ ಅಕ್ರಮ ಮಾರಾಟದ ಮೂಲಕ ಬಂದ ‘‘ಅಕ್ರಮ ಹಣ’’ದಿಂದ ಈ ಜಮೀನನ್ನು ಪಡೆಯಲಾಗಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಆರೋಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ, ಐಎಎಸ್ ಅಧಿಕಾರಿ ಛಾವಿ ರಂಜನ್ ಮತ್ತು ಕೋಲ್ಕತದ ಉದ್ಯಮಿ ಅಮಿತ್ ಅಗ್ರವಾಲ್ ರನ್ನು ಈಗಾಗಲೇ ಬಂಧಿಸಲಾಗಿದೆ.
ಈ ಪ್ರಕರಣದ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜನವರಿ 27 ಮತ್ತು 31ರ ನಡುವೆ ಹೇಳಿಕೆ ನೀಡುವಂತೆ ಅನುಷ್ಠಾನ ನಿರ್ದೇಶನಾಲಯವು ಜಾರ್ಖಂಡ್ ಮುಕ್ತಿ ಮೋರ್ಚ ನಾಯಕನಿಗೆ ಸೂಚನೆ ನೀಡಿದೆ.
ಅನುಷ್ಠಾನ ನಿರ್ದೇಶನಾಲಯವು ಸೊರೇನ್ ರನ್ನು ಅವರ ನಿವಾಸದಲ್ಲಿ ಏಳು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಎರಡು ದಿನಗಳ ಬಳಿಕ ಹೊಸ ಸಮನ್ಸ್ ನೀಡಲಾಗಿದೆ.
ಅದಕ್ಕೂ ಮೊದಲು, ಸೊರೇನ್ ಅನುಷ್ಠಾನ ನಿರ್ದೇಶನಾಲಯದ ಏಳು ಸಮನ್ಸ್ ಗಳನ್ನು ನಿರ್ಲಕ್ಷಿಸಿದ್ದರು ಮತ್ತು ಎಂಟನೇ ಸಮನ್ಸ್ ಗೆ ವಿಚಾರಣೆಗೆ ಹಾಜರಾಗಿದ್ದರು.
ಕೇಂದ್ರದ ಬಿಜೆಪಿ ಸರಕಾರವು ನನ್ನ ರಾಜ್ಯ ಸರಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದೆ ಎಂದು ಶನಿವಾರ ನಡೆದ ವಿಚಾರಣೆಯ ಬಳಿಕ ಸೊರೇನ್ ಆರೋಪಿಸಿದ್ದಾರೆ.