ಅವರು ನನ್ನ ಬಾಯಿ ಮುಚ್ಚಿಸಲು ಬಯಸಿದ್ದಾರೆ, ಆದರೆ ನಾನು ಬಾಯಿ ಮುಚ್ಚುವುದಿಲ್ಲ: ಮಹುವಾ ಮೊಯಿತ್ರಾ

ಬಿಜೆಪಿ ಸಂಸದ ನಿಶಿಕಾಂತ ದುಬೆ ಮತ್ತು ನ್ಯಾಯವಾದಿ ಜೈ ಅನಂತ ದೇಹದ್ರಾಯ್ ಅವರು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ ಹಿರಾನಂದನಿಯವರಿಂದ ಲಂಚ ಮತ್ತು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದರು ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಸಭೆಯ ನೀತಿ ಸಮಿತಿಗೆ ದೂರು ಸಲ್ಲಿಕೆಯಾಗಿದೆ. ಸಮಿತಿಯು ನ.2ರಂದು ತನ್ನ ಮುಂದೆ ಹಾಜರಾಗಿ ಹೇಳಿಕೆಯನ್ನು ನೀಡುವಂತೆ ಮೊಯಿತ್ರಾರಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ telegraphindia.comಗಾಗಿ ಸಂಕರ್ಷಣ ಠಾಕೂರ್ ಅವರು ಮೊಯಿತ್ರಾರ ಸಂದರ್ಶನವನ್ನು ನಡೆಸಿದ್ದು, ಅದರ ಆಯ್ದ ಭಾಗಗಳು ಇಲ್ಲಿವೆ....

Update: 2023-10-29 15:31 GMT

ಮಹುವಾ ಮೊಯಿತ್ರಾ (Photo- PTI)

ಮುಂದಿನ ವಾರ ನೀವು ಲೋಕಸಭೆಯ ನೀತಿ ಸಮಿತಿಯ ಮುಂದೆ ಹಾಜರಾಗುತ್ತಿದ್ದೀರಿ. ಇದರಿಂದ ನೀವು ಆತಂಕಕ್ಕೊಳಗಾಗಿದ್ದೀರಾ?

-ಇಲ್ಲವೇ ಇಲ್ಲ, ನಾನೇಕೆ ಆತಂಕ ಪಡಬೇಕು? ಸಹಜ ನ್ಯಾಯದ ಹಿತದೃಷ್ಟಿಯಿಂದ ಸಮಿತಿಯು ದೂರು ಸ್ವೀಕರಿಸಿದ ಬಳಿಕ ಮೊದಲು ನನ್ನನ್ನೇ ಕರೆಯಬೇಕಿತ್ತು. ಆದರೆ ಇಲ್ಲಿ ಮುಖ್ಯವಾಗಿರುವುದೇನೆಂದರೆ ಈ ವಿಷಯವು ನೀತಿ ಸಮಿತಿಗೆ ಹೋಗಲೇಬಾರದಿತ್ತು. ನೀತಿ ಸಮಿತಿಗೆ ಪರಿಚಯಾತ್ಮಕ ಮಾರ್ಗಸೂಚಿ ನನ್ನ ಮುಂದಿದೆ. ದೂರು ಸುಳ್ಳು ಅಥವಾ ನಿಷ್ಪ್ರಯೋಜಕವಲ್ಲ ಎನ್ನುವುದನ್ನು ರುಜುವಾತು ಮಾಡುವುದು ದೂರುದಾರನ ಹೊಣೆಯಾಗಿದೆ ಎಂದು ಇದು ಸ್ಪಷ್ಟವಾಗಿ ಹೇಳುತ್ತಿದೆ. ದೂರು ನೀಡಿರುವ ವ್ಯಕ್ತಿ ಲೋಕಸಭೆಯ ಸದಸ್ಯರಲ್ಲ, ಅವರು ನನ್ನ ಮಾಜಿ ಸಂಗಾತಿಯಾಗಿದ್ದು, ನನ್ನೊಂದಿಗೆ ಕಹಿ ಸಂಬಂಧದ ಇತಿಹಾಸವನ್ನು ಹೊಂದಿದ್ದಾರೆ. ಅವರು ನನ್ನ ಮಾರ್ಫ್ಡ್ ಫೋಟೊಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದರು. ಸಾಕುನಾಯಿಯೊಂದರ ಕಸ್ಟಡಿಗಾಗಿ ಅವರು ಸಾರ್ವಜನಿಕವಾಗಿ ಹೋರಾಡುತ್ತಿದ್ದಾರೆ. ಇವೆಲ್ಲ ತೀರ ವೈಯಕ್ತಿಕ ವಿಚಾರಗಳು. ಸಂಬಂಧಗಳು ಹೇಗೆ ಆರಂಭವಾಗಬೇಕು ಮತ್ತು ಅಂತ್ಯಗೊಳ್ಳಬೇಕು ಹಾಗೂ ನಾಯಿಯ ಕಸ್ಟಡಿ ಕುರಿತು ಹೋರಾಟ ಹೇಗೆ ಮುಂದುವರಿಯಬೇಕು ಎನ್ನುವುದನ್ನು ನಿರ್ಧರಿಸಲು ನೀತಿ ಸಮಿತಿಯು ಖಂಡಿತವಾಗಿಯೂ ವೇದಿಕೆಯಲ್ಲ.

ಆದರೆ ನಿಮ್ಮ ವಿರುದ್ದದ ಆರೋಪಗಳು ಗಂಭೀರವಾಗಿವೆ. ನೀವು ನಿಮ್ಮ ಲಾಗಿನ್ ವಿವರಗಳನ್ನು ನಿಮ್ಮ ಉದ್ಯಮಿ ಮಿತ್ರರಿಗೆ ನೀಡಿದ್ದು ಸಂಸದೀಯ ಹಕ್ಕುಗಳ ಗಂಭೀರ ಉಲ್ಲಂಘನೆಯಲ್ಲವೇ? ದುಬಾರಿ ಉಡುಗೊರೆಗಳನ್ನು ಮತ್ತು ಲಂಚವನ್ನು ಸ್ವೀಕರಿಸುವುದು ಹಾಗೂ ಬೇರೊಬ್ಬರ ಖರ್ಚಿನಲ್ಲಿ ನಿಮ್ಮ ಅಧಿಕೃತ ನಿವಾಸವನ್ನು ನವೀಕರಿಸುವುದು; ಇವೆಲ್ಲ ಅನುಚಿತವಲ್ಲವೇ?

-ಬಿಜೆಪಿಯೊಂದಿಗಿನ ಸಮಸ್ಯೆಯೆಂದರೆ ಅವರು ಯಾರದಾದರೂ ಬೆನ್ನ ಹಿಂದೆ ಬಿದ್ದರೆ ಅವರು ಮಾಧ್ಯಮ ವಿಚಾರಣೆಗಳು ಮತ್ತು ಅಂತಹ ವಿಷಯಗಳ ಮೂಲಕ ತಮಗೆ ಪೂರಕ ವಾತಾವರಣವೊಂದನ್ನು ಸೃಷ್ಟಿಸುತ್ತಾರೆ ಮತ್ತು ನಿಮ್ಮನ್ನು ಅದರಲ್ಲಿ ಸಿಲುಕಿಸುತ್ತಾರೆ.

ನಾನು ಪ್ರತಿಯೊಂದು ಆರೋಪವನ್ನು ಸುಳ್ಳು ಎಂದು ಸಾಬೀತು ಮಾಡುತ್ತೇನೆ. ಮೊದಲ ಪ್ರಶ್ನೆ ಹಣ ಸ್ವೀಕಾರ. ನಾನು ಈ ಮೊದಲು ಶಾಸಕಿಯಾಗಿದ್ದೆ ಮತ್ತು ಸಾರ್ವಜನಿಕ ಸೇವಕಿಯಾಗಿ ನಿಷ್ಕಳಂಕ ದಾಖಲೆಯನ್ನು ಹೊಂದಿದ್ದೇನೆ. ನನ್ನ ಮಾಜಿ ಸಂಗಾತಿ ಸಾದಾ ಕಾಗದದ ಮೇಲೆ ಬರೆಯುವಂತೆ ನೀವು ಪ್ರೇರೇಪಿಸಿದ್ದೀರಿ ಮತ್ತು ನಾನು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಎರಡು ಕೋಟಿ ರೂ.ಗಳ ನಗದು ಮತ್ತು ಚುನಾವಣಾ ವೆಚ್ಚಕ್ಕಾಗಿ 75 ಲ.ರೂ.ಗಳನ್ನು ಸ್ವೀಕರಿಸಿದ್ದೇನೆ ಎಂದು ಆರೋಪಿಸಿ ನಿಶಿಕಾಂತ ದುಬೆ ಅದನ್ನು ಮುಂದಕ್ಕೆ ತಳ್ಳಿದ್ದಾರೆ. ಇಂತಹ ದೂರೊಂದನ್ನು ಸಲ್ಲಿಸಿದಾಗ ದಾಖಲೆಗಳ ರೂಪದಲ್ಲಿ ಏನಾದರೂ ಸಾಕ್ಷ್ಯಾಧಾರಗಳು ಇರಲೇಬೇಕು. ನಗದು ಎಲ್ಲಿಂದ ಬಂದಿತ್ತು ಮತ್ತು ಅದನ್ನು ಎಲ್ಲಿ ನೀಡಲಾಗಿತ್ತು ಇತ್ಯಾದಿ ಮಾಹಿತಿಗಳು ಇರಬೇಕು. ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಅವರು ಬಳಸುತ್ತಿರುವ ಹಿರಾನಂದನಿಯವರ ತಥಾಕಥಿತ ಅಫಿಡವಿಟ್‌ನ್ನೇ ತೆಗೆದುಕೊಳ್ಳಿ, ಅದರಲ್ಲಿ ನಗದು ಹಣದ ಉಲ್ಲೇಖವೇ ಇಲ್ಲ. ನೀತಿ ಸಮಿತಿಯು ಸಾಕ್ಷ್ಯವನ್ನು ಒದಗಿಸುವಂತೆ ನನ್ನ ಮಾಜಿ ಸಂಗಾತಿಗೆ 14 ಸಲ ಸೂಚಿಸಿತ್ತು ಮತ್ತು ಪ್ರತಿ ಸಲವೂ ಅವರು ಬರಿಗೈಯಲ್ಲಿಯೇ ಬಂದಿದ್ದರು. ಹೀಗಾಗಿ ಇಲ್ಲೀಗ ನಗದು ಹಣದ ಪ್ರಶ್ನೆಯೇ ಉಳಿದುಕೊಂಡಿಲ್ಲ. ಎರಡನೇ ವಿಷಯ ನಾನು ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದೇನೆ ಎನ್ನುವುದು. ಅದಕ್ಕೆ ಏನಾದರೂ ಪುರಾವೆಯಿದೆಯೇ? ಯಾರು ನನಗೆ ಏನನ್ನು ನೀಡಿದ್ದರು ಎಂಬ ಪಟ್ಟಿಯೇನಾದರೂ ಇದೆಯೇ? ತಥಾಕಥಿತ ಮಾಫಿ ಸಾಕ್ಷಿದಾರ ಮತ್ತು ಈಗಲು ನನ್ನ ಅತ್ಯುತ್ತಮ ಸ್ನೇಹಿತರಾಗಿಯೇ ಉಳಿದಿರುವ ಹಿರಾನಂದನಿ ತನ್ನ ಅಫಿಡವಿಟ್‌ನಲ್ಲಿ ದುಬಾರಿ ಉಡುಗೊರೆಗಳನ್ನು... ಫೆರ್ರಾಗಾಮೋ ಶೂಗಳು,ಗುಕಿ ಹ್ಯಾಂಡ್‌ಬ್ಯಾಗ್‌ಗಳು,ವಜ್ರದ ನೆಕ್ಲೇಸ್‌ಗಳು,ಉಂಗುರಗಳು ಹೀಗೆ ಏನೇನೆಲ್ಲ ಪಟ್ಟಿ ಮಾಡಬೇಕಿತ್ತು. ಅವರು ಅದನ್ನು ಮಾಡಿದ್ದಾರೆಯೇ? ಇಲ್ಲ. ಅವರು ಎಂದಾದರೂ ನನಗೆ ನೀಡಿದ್ದೆಂದರೆ ಕೆಲವು ವರ್ಷಗಳ ಹಿಂದೆ ನನ್ನ ಜನ್ಮದಿನದಂದು ಒಂದು ಹರ್ಮಿಸ್ ಸ್ಕಾರ್ಫ್ ಮಾತ್ರ. ಅವರು ದುಬೈ ಮೂಲಕ ಪ್ರಯಾಣಿಸಿದ್ದಾಗ ನನಗಾಗಿ ಬಾಬಿ ಬ್ರೌನ್ ಮೇಕಪ್, ಲಿಪ್‌ಸ್ಟಿಕ್‌ಗಳು ಅಥವಾ ಐ ಶ್ಯಾಡೋದಂತಹ ಕೆಲವು ಡ್ಯೂಟಿ ಫ್ರೀ ವಸ್ತುಗಳನ್ನು ಖರೀದಿಸಿದ್ದರು. ಇದು ಹಾಸ್ಯಾಸ್ಪದವಾಗಿ ತೋರುತ್ತದೆಯಾದರೂ ನಮ್ಮನ್ನು ಇಷ್ಟೊಂದು ಕೆಳಮಟ್ಟಕ್ಕಿಳಿಸಲಾಗಿದೆ. ಸರಕಾರ ಮತ್ತು ಗೌತಮ್ ಅದಾನಿಯ ಕಟು ಟೀಕಾಕಾರಳಾಗಿರುವ ನಾನು ನನ್ನ ಮೇಕಪ್ ಆಯ್ಕೆಗಳನ್ನು ರಾಷ್ಟ್ರೀಯ ಮಾಧ್ಯಮಗಳ ಮುಂದೆ ವಿವರಿಸಬೇಕಿದೆ. ನಂತರ, ನವೀಕರಣದ ವಿಷಯ. ಹಿರಾನಂದನಿಗಳು ಭಾರತದ ಅತ್ಯಂತ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲೊಂದು. ನನಗೆ ಅಧಿಕೃತ ನಿವಾಸವನ್ನು ನೀಡಿದಾಗ ಮನೆಯೊಳಗೆ ಹೆಚ್ಚಿನ ಗಾಳಿ ಬೆಳಕಿಗಾಗಿ ನಿಮ್ಮ ಯಾರಾದರೂ ವಾಸ್ತುಶಿಲ್ಪಿ ಸಲಹೆಯನ್ನು ನೀಡಬಹುದೇ ಎಂದು ನಾನು ಹಿರಾನಂದನಿಯನ್ನು ಕೇಳಿದ್ದೆ. ಅವರ ವಾಸ್ತುಶಿಲ್ಪಿ ನಕ್ಷೆಯೊಂದನ್ನು ತಯಾರಿಸಿದ್ದು ಅದನ್ನು ಸಿಪಿಡಬ್ಲ್ಯುಡಿ ಗುತ್ತಿಗೆದಾರರಿಗೆ ನೀಡಿದ್ದೆ ಮತ್ತು ಅವರು ನವೀಕರಣವನ್ನು ಮಾಡಿದ್ದರು. ಯಾವುದೇ ಖಾಸಗಿ ವ್ಯಕ್ತಿ ನನ್ನ ನಿವಾಸವನ್ನು ನವೀಕರಿಸಿಲ್ಲ,ಅದನ್ನು ಸಂಪೂರ್ಣವಾಗಿ ಸಿಪಿಡಬ್ಲ್ಯುಡಿಯೇ ಮಾಡಿದೆ. ನಾನು ಮುಂಬೈಗೆ ಹೋದಾಗ (ನಾಲ್ಕೈದು ಸಲ ಹೋಗಿರಬಹುದು) ಹಿರಾನಂದನಿಯವರ ಕಾರು ನನ್ನನ್ನು ವಿಮಾನ ನಿಲ್ದಾಣದಿಂದ ಕರೆದೊಯ್ದಿತ್ತು ಮತ್ತು ವಾಪಸ್ ತಂದು ಬಿಟ್ಟಿತ್ತು. ದುಬೈನಲ್ಲಿಯೂ ಒಮ್ಮೆ ಹೀಗೆಯೇ ಆಗಿತ್ತು. ಇದು ನಾನು ಹಿರಾನಂದನಿಯವರಿಂದ ಪಡೆದಿದ್ದ ಒಟ್ಟು ಸೌಲಭ್ಯಗಳು.

ಸಂಸದರಾಗಿ ನೀವು ಹೊಂದಿರುವ ಲಾಗಿನ್ ಪ್ರೊಟೊಕಾಲ್‌ಗಳ ವಿಷಯವೇನು? ನೀವು ಅದನ್ನು ನಿಮ್ಮ ಉದ್ಯಮಿ ಸ್ನೇಹಿತರಿಗೆ ನೀಡಿದ್ದು ಹೇಗೆ?

-ಲಾಗಿನ್ ಸರಳವಾಗಿದೆ. ಅದೇನೋ ಪರಮಾಣು ರಹಸ್ಯಗಳನ್ನು ತೆರೆಯುವ ಸಾಧನ ಎಂಬಂತೆ ಮಾಡುತ್ತಿದ್ದಾರೆ. 2019ರ ಮೊದಲ ಆರು ತಿಂಗಳವರೆಗೆ ನಾವು ನಮ್ಮ ಪ್ರಶ್ನೆಗಳನ್ನು ಬರೆದು, ಸಹಿ ಮಾಡಿ ಸಲ್ಲಿಸಿದ್ದೆವು. ಇಂದಿಗೂ ನಾನು ಅದನ್ನು ಮಾಡಬಲ್ಲೆ. ಹೀಗಾಗಿ ಯಾರಾದರೂ ನನಗೆ ಹಣ ನೀಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಸಂಸದರಿಗೆ ಪೋರ್ಟಲ್‌ಗಾಗಿ ಎನ್‌ಐಸಿ ಐಡಿಗಳನ್ನು ನೀಡಲಾಗುತ್ತದೆ ಮತ್ತು ಅವುಗಳಲ್ಲಿ ಪ್ರಶ್ನೆಗಳನ್ನು ಅಪ್‌ಲೋಡ್ ಇತ್ಯಾದಿಗಳನ್ನು ಮಾಡಬಹುದು. ಲೋಕಸಭಾ ಸದಸ್ಯೆಯಾಗಿ ನನ್ನ ಇ-ಮೇಲ್ ಐಡಿ ಪ್ರತ್ಯೇಕವಾಗಿದೆ ಮತ್ತು ಅದನ್ನು ನಾನು ಯಾರೊಂದಿಗೂ ಹಂಚಿಕೊಂಡಿಲ್ಲ. ಪೋರ್ಟಲ್ ಐಡಿ ಎಲ್ಲ ಸಂಸದಸರಿಗಾಗಿದೆ, ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲು ಕಾರ್ಯದರ್ಶಿ, ಪೂರಕ ಸಿಬ್ಬಂದಿ ಮತ್ತು ಇಂಟರ್ನ್‌ಗಳು ಅದನ್ನು ಬಳಸುವ ಪರಿಪಾಠವಿದೆ. ಎಲ್ಲ ಸಂಸದರು ಲಾಗಿನ್ ವಿವರಗಳನ್ನು ಹಂಚಿಕೊಳ್ಳುತ್ತಾರೆ, ಅದೇನೂ ರಾಷ್ಟ್ರೀಯ ಭದ್ರತೆಗೆ ಏನೋ ಬೆದರಿಕೆಯನ್ನು ಒಡ್ಡಬಹುದಾದ ರಹಸ್ಯವಲ್ಲ. ನಾನೇನಾದರೂ ದುರುಪಯೋಗದ ತಪ್ಪು ಮಾಡಿದ್ದರೆ, ಯಾವುದೋ ಸರಕಾರಿ ರಹಸ್ಯವನ್ನು ಉಲ್ಲಂಘಿಸಿದ್ದರೆ ಅವರು ನನ್ನನ್ನು ನೀತಿ ಸಮಿತಿಯ ಮುಂದೆ ಒಯ್ಯುತ್ತಿರಲಿಲ್ಲ, ಅವರು ನನ್ನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಹೇರಿ ಜೈಲಿಗೆ ತಳ್ಳುತ್ತಿದ್ದರು.

ಆದರೆ ನಿಮ್ಮ ಉದ್ಯಮಿ ಸ್ನೇಹಿತ ನಿಮ್ಮ ಲಾಗಿನ್ ವಿವರಗಳನ್ನು ಹೊಂದಿದ್ದು ಏಕೆ?

-ನಾನು ದೂರದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ನನ್ನ ಪರವಾಗಿ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಬಲ್ಲ ಯಾರಾದರನ್ನು ಒದಗಿಸಲು ಸಾಧ್ಯವೇ ಎಂದು ನಾನು ಹಿರಾನಂದನಿಯವರನ್ನು ಕೇಳಿದ್ದೆ. ಪ್ರತಿ ಬಾರಿ ನಿಮ್ಮ ಹೆಸರಿನಲ್ಲಿ ಪ್ರಶ್ನೆಯನ್ನು ಹಾಕಿದಾಗ ಒಟಿಪಿ ಬರುತ್ತದೆ ಮತ್ತು ಅದನ್ನು ನೀವು ನೀಡಬೇಕಾಗುತ್ತದೆ. ಶೇ.99ರಷ್ಟು ಸಂಸದರು ಈ ಒಟಿಪಿಗಳಿಗಾಗಿ ತಮ್ಮ ಸ್ವಂತ ಫೋನ್ ಸಂಖ್ಯೆಗಳನ್ನೂ ನಿಡುವುದಿಲ್ಲ. ಆದರೆ ನಾನು ವೈಯಕ್ತಿಕವಾಗಿ ಎಲ್ಲ ಓಟಿಪಿಗಳನ್ನು ಸ್ವೀಕರಿಸುತ್ತೇನೆ.

ಆದರೆ ಹಿರಾನಂದನಿ ನಿಮ್ಮ ಸಿಬ್ಬಂದಿಯಲ್ಲ ಅಥವಾ ನಿಮ್ಮ ಕಚೇರಿಯ ಭಾಗವಲ್ಲವಲ್ಲ...

-ಹಿರಾನಂದನಿಯವರೇ ಸ್ವತಃ ಪ್ರಶ್ನೆಗಳನ್ನು ಟೈಪ್ ಮಾಡುತ್ತಾರೆ ಎಂದು ನೀವು ಭಾವಿಸಿದ್ದೀರಾ? ಅದನ್ನು ಕಾರ್ಯದರ್ಶಿಗಳು ಮಾಡುತ್ತಾರೆ ಮತ್ತು ನಾನು ಒಟಿಪಿಗಳೊಂದಿಗೆ ಅವುಗಳನ್ನು ಅನುಮೋದಿಸುತ್ತೇನೆ. ಎನ್‌ಐಸಿ ಲಾಗಿನ್ ಬಳಕೆಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಪ್ರಶ್ನೆಗಳನ್ನು ಟೈಪ್ ಮಾಡುವಂತೆ ನಾನು ಇಂಗ್ಲಂಡ್‌ನಲಿರುವ ನನ್ನ ಸೋದರ ಸೊಸೆಯನ್ನು ಕೇಳಿಕೊಳ್ಳುತ್ತೇನೆ ಮತ್ತು ನನ್ನ ಕೆಲವು ಸಿಬ್ಬಂದಿಗಳಿಗೆ ಇಂಗ್ಲಿಷ್ ಚೆನ್ನಾಗಿ ತಿಳಿದಿಲ್ಲ, ಎನ್‌ಐಸಿ ಐಡಿಗಳ ಬಳಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಇದು ಸಕಾಲ ಮತ್ತು ನಿಮ್ಮ ಬಳಿ ಅತ್ಯಂತ ರಹಸ್ಯ ಸಾಧನವಿದೆ ಮತ್ತು ಅದನ್ನು ಗೋಪ್ಯವಾಗಿಟ್ಟುಕೊಳ್ಳಿ ಎಂದು ಎಲ್ಲ ಸಂಸದರಿಗೆ ತಿಳಿಸಿ.

ನೀವು ಇದನ್ನು ಹಿಟ್ ಜಾಬ್ ಎಂದು ಕರೆಯುತ್ತಿದ್ದೀರಿ. ಈ ಪದದ ಬಳಕೆಯನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಯಾರಾದರೂ ಮೊಯಿತ್ರಾ ವರ್ತನೆಯ ಬಗ್ಗೆ ಪ್ರಶ್ನೆಯನ್ನೆತ್ತಿದರೆ ಅದು ಹಿಟ್ ಜಾಬ್ ಆಗುತ್ತದೆಯೇ?

-ಹಿಟ್ ಜಾಬ್ ಪದ ಚಿಕಾಗೋ ಮಾಫಿಯಾದಿಂದ ಬಂದಿದೆ. ಯಾರನ್ನಾದರೂ ಬಲೆಯಲ್ಲಿ ಸಿಲುಕಿಸಲು ನಿರ್ಧರಿಸಿದಾಗ ಅದನ್ನು ಹಿಟ್ ಜಾಬ್ ಎಂದು ಕರೆಯಲಾಗುತ್ತದೆ. ಎರಡು ವರ್ಷಗಳ ಹಿಂದೆ ತನ್ನೊಂದಿಗೆ ಕುಳಿತು ಮಾತನಾಡಿ ಮತ್ತು ವಿಷಯಗಳನ್ನು ಬಗೆಹರಿಸಿಕೊಳ್ಳೋಣ ಎಂದು ಅದಾನಿ ಇಬ್ಬರು ಸಂಸದರ ಮೂಲಕ ನನ್ನನ್ನು ಪುಸಲಾಯಿಸಿದ್ದರು,ಈ ಸಂಸದರನ್ನು ನಾನು ಹೆಸರಿಸುವುದಿಲ್ಲ,ನಾನು ಅದಾನಿಯವರನ್ನು ಭೇಟಿಯಾಗಲು ನಿರಾಕರಿಸಿದ್ದೆ. ಕಳೆದ ವಾರ ವಿವಾದ ಸೃಷ್ಟಿಯಾದ ಬಳಿಕ ನನಗೆ ಫೊನ್ ಕರೆ ಬಂದಿತ್ತು, ಬನ್ನಿ ಕುಳಿತು ಮಾತನಾಡೋಣ, ಚುನಾವಣೆಗಳವರೆಗೆ ಆರು ತಿಂಗಳು ಸುಮ್ಮನಿರಿ,ಎಲ್ಲವೂ ಸರಿಹೋಗುತ್ತದೆ ಎಂದು ನನಗೆ ಸೂಚಿಸಲಾಗಿತ್ತು. ಇದು ಪ್ರಶ್ನೆಗಳಿಗಾಗಿ ನಗದು ಅಲ್ಲ,ಪ್ರಶ್ನೆಗಳನ್ನು ಕೇಳದಿರುವುದಕ್ಕಾಗಿ ನಗದು!

ನಿಮಗೆ ಹಣ ನೀಡುವ ಕೊಡುಗೆ ಏನಾದರೂ ಇತ್ತೇ?

-ಇಲ್ಲ,ನಾನು ಆ ವ್ಯಕ್ತಿಯನ್ನು ಭೇಟಿಯಾಗಲು ನಿರಾಕರಿಸಿದ್ದೆ,ಆದರೆ ಅವರು ನನ್ನನ್ನು ಏಕೆ ಭೇಟಿಯಾಗಬೇಕು? ಅವರು ನನ್ನ ಬಾಯಿ ಮುಚ್ಚಿಸಲು ಬಯಸುತ್ತಿದ್ದಾರೆ ಮತ್ತು ಬಾಯಿ ಮುಚ್ಚಲು ನಾನು ನಿರಾಕರಿಸುತ್ತೇನೆ. ನಾವು ಅಭಿಷೇಕ ಬ್ಯಾನರ್ಜಿಯವರ ನೇತೃತ್ವದಲ್ಲಿ ಬೃಹತ್ ಮತ್ತು ಅತ್ಯಂತ ಯಶಸ್ವಿ ನರೇಗಾ ಆಂದೋಲನವನ್ನು ನಡೆಸುತ್ತಿದ್ದೇವೆ ಮತ್ತು ಅದು ಪ್ರತಿಯೊಬ್ಬರ ಗಮನವನ್ನು ಸೆಳೆದಿದೆ. ಅವರು ಏನು ಮಾಡುತ್ತಾರೆ? ಅವರು ಆಂದೋಲನದಲ್ಲಿ ಭಾಗಿಯಾಗಿರುವ ನೇರ ನಿಷ್ಠುರ ನಾಯಕನ್ನು ಆಯ್ಕೆ ಮಾಡುತ್ತಾರೆ. ಅವರು ನಾಯಿಯ ಕುರಿತು ಚಿಲ್ಲರೆ ಜಗಳ ಮತ್ತು ನನ್ನ ಮಾಜಿ ಸಂಗಾತಿಗೆ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಇಡೀ ದೇಶವು ಅದರ ಬಗ್ಗೆ ಮಾತನಾಡುತ್ತದೆ. ಆಗ ನಮ್ಮ ನರೇಗಾ ಆಂದೋಲನಕ್ಕೆ ಏನಾಗುತ್ತದೆ? ಅದಾನಿಯ 13,000 ಕೋ.ರೂ.ಗಳ ಹಗರಣವನ್ನು ಫೈನಾನ್ಸಿಯಲ್ ಟೈಮ್ಸ್ ಬಯಲಿಗೆಳೆದಿದೆ. ನಾನು ಈ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದೇನೆ. ಹೀಗೆ ಇದು ಹಿಟ್ ಜಾಬ್ ಆಗಿದೆ. ಮೊಯಿತ್ರಾಳನ್ನು ಸುಲಭದಲ್ಲಿ ಮಣಿಸಲು ಸಾಧ್ಯವಿಲ್ಲ,ಹೀಗಾಗಿ ಅವರು ಇಂತಹ ಚಿಲ್ಲರೆ ವಿಷಯಗಳನ್ನು ಬಳಸುತ್ತಿದ್ದಾರೆ.

ನಿಮ್ಮ ಮತ್ತು ದುಬೆ ನಡುವಿನ ಇತಿಹಾಸವೇನು? ಈ ಕಲಹ ಏತಕ್ಕೆ?

-ದುಬೆ ಅತ್ಯಂತ ನಿಂದನೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಭ್ರಷ್ಟ ವೃತ್ತಿಪರ ಹೆಕ್ಲರ್ ಆಗಿದ್ದಾರೆ. ನಾನು ಅವರ ವಿರುದ್ಧ ವಿಶೇಷಾಧಿಕಾರ ಉಲ್ಲಂಘನೆಯನ್ನು ದಾಖಲಿಸಿದ್ದೇನೆ. ಅವರ ಬಳಿ ಸ್ನಾತಕೋತ್ತರ ಪದವಿಯೇ ಇಲ್ಲ,ಅವರು ಹೇಗೆ ಪಿಎಚ್‌ಡಿ ಹೊಂದಿರಲು ಸಾಧ್ಯ? ನಾನು ಇದರ ಹಿಂದೆ ಬಿದ್ದಿದ್ದೆ. ಅವರು ಹಿಟ್ ಮ್ಯಾನ್ ಆಗಿದ್ದಾರೆ,ಆದರೆ ನಾನು ಅವರ ಹೊಡೆತಕ್ಕೆ ಸಿಗುವುದಿಲ್ಲ. ರಾಜಕೀಯದಲ್ಲಿ ಇಂತಹ ವ್ಯಕ್ತಿಗಳನ್ನೂ ಭೇಟಿಯಾಗಬೇಕಿರುವುದು ದುರ್ದೈವ.

ಅದಾನಿ ಕರೆಗಳನ್ನು ನೀವೇಕೆ ಸ್ವೀಕರಿಸುವುದಿಲ್ಲ?

-ನಾನು ಅವರ ಕರೆಗಳನ್ನು ಸ್ವೀಕರಿಸುವುದಿಲ್ಲ,ಏಕೆಂದರೆ ಉಳಿದವರಂತೆ ಮಾರಾಟಗೊಳ್ಳಲು ನಾನು ಬಯಸುವುದಿಲ್ಲ. ಅವರು ಈ ಸರಕಾರದ ನೆರವಿನಿಂದ ಈ ದೇಶ ಮತ್ತು ಜನತೆಯ ಮೇಲೆ ಅತ್ಯಂತ ದೊಡ್ಡ ಹಗರಣವನ್ನು ಎಳೆದು ತರುತ್ತಿದ್ದಾರೆ ಮತ್ತು ಆ ಕುರಿತು ಮಾತನಾಡುವುದನ್ನು ನಾನು ಮುಂದುವರಿಸುತ್ತೇನೆ. ನನಗೆ ಅದಾನಿ ಬಳಿ ಬಗೆಹರಿಸಿಕೊಳ್ಳುವುದು ಏನೂ ಇಲ್ಲ.

ಈ ವಿಷಯದಲ್ಲಿ ನಿಮ್ಮ ಪಕ್ಷ ಮತ್ತು ಮಮತಾ ಬ್ಯಾನರ್ಜಿ ನಿಮ್ಮನ್ನು ಬೆಂಬಲಿಸುತ್ತಿಲ್ಲ ಎಂಬ ವ್ಯಾಪಕ ಗ್ರಹಿಕೆಯಿದೆ,ಇದು ನಿಜವೇ?

-ಇದು ಬಿಜೆಪಿಯು ಹರಡಲು ಬಯಸುತ್ತಿರುವ ಇನ್ನೊಂದು ವಿಷಯವಾಗಿದೆ. ಅವರು ಕಳೆದ ಐದು ವರ್ಷಗಳಲ್ಲಿ ಹಲವು ಬಾರಿ ನನ್ನ ರಾಜಕೀಯ ಶ್ರದ್ಧಾಂಜಲಿಯನ್ನು ಬರೆದಿದ್ದಾರೆ, ಅವರಿಗೆ ಮಮತಾ ಬ್ಯಾನರ್ಜಿ ಜೊತೆಗಿನ ನನ್ನ ಸಂಬಂಧದ ಬಗ್ಗೆ ಸಹ ಗೊತ್ತಿಲ್ಲ. ಮಮತಾ ನನಗೆ ಜನ್ಮವನ್ನು ನೀಡಿಲ್ಲ ಅಷ್ಟೇ,ಅವರು ನನ್ನ ತಾಯಿಯಾಗಿದ್ದಾರೆ. ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಸವಾಲುಗಳ ವಿರುದ್ಧ ಅವರು ಹೋರಾಡುತ್ತಿದ್ದಾರೆ. ಈ ಎಲ್ಲವುಗಳ ಮಧ್ಯೆ ಅವರು ಏನು ಮಾತನಾಡಬೇಕು? ನಾನು ಈ ವಿವಾದದಿಂದ ಹೊರಬರುವ ವಿಶ್ವಾಸ ಅವರಲ್ಲಿದೆ ಮತ್ತು ನಾನು ವಿವಾದದಿಂದ ಹೊರಬರುತ್ತೇನೆ.

ನಿಮಗೆ ಸಂಸತ್ತಿನಂದ ಉಚ್ಚಾಟಿಸಲ್ಪಡುವ ಭಯವಿದೆಯೇ?

-ನೋಡಿ, ಅದು ಬಿಜೆಪಿ. ಅದು ಏನು ಬೇಕಾದರೂ ಮಾಡಬಹುದು. ಆದರೆ ಅದನ್ನು ಮಾಡಲು ನೀತಿ ಸಮಿತಿಗೆ ಅಧಿಕಾರವಿಲ್ಲ. ಹಿರಾನಂದನಿ ಕೂಡ ಬಂದು ಹೇಳಿಕೆಯನ್ನು ದಾಖಲಿಸಬೇಕು ಮತ್ತು ಸಮಿತಿಯು ಅವರನ್ನೂ ಕರೆಸಬೇಕು. ಆಗ ಉಡುಗೊರೆಗಳು ಮತ್ತು ಇತರ ಎಲ್ಲ ವಿಷಯಗಳು ಸ್ಪಷ್ಟವಾಗುತ್ತವೆ, ಏಕೆಂದರೆ ಅವರು ನನಗೆ ಶೂಗಳು ಮತ್ತು ಬ್ಯಾಗ್‌ಗಳನ್ನು ನೀಡಿಲ್ಲ, ಉಡುಗೊರೆಗಳನ್ನು ನೀಡಿದ್ದೇನೆ ಎಂದು ಸಾಬೀತು ಮಾಡಲು ಅವರಿಗೆ ಸಾಧ್ಯವಿಲ್ಲ. ಅವರು ನನಗೆಂದೂ ನಗದು ಹಣವನ್ನು ನೀಡಿಲ್ಲ,ಪುರಾವೆಯನ್ನು ಸೃಷ್ಟಿಸಲು ಅವರಿಗೆ ಸಾಧ್ಯವಿಲ್ಲ. ಬಡಪಾಯಿ,ಅವರೋರ್ವ ಉದ್ಯಮಿ. ಬಿಜೆಪಿಯವರು ಅವರನ್ನು ಬೆದರಿಸಿ ಅಫಿಡವಿಟ್‌ಗೆ ಸಹಿ ಹಾಕುವಂತೆ ಹೇಳಿದ್ದಾರೆ. ಅನೇಕ ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೂ ಅವರು ಉದ್ಯಮಗಳನ್ನು ಹೊಂದಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News