ಲೋಕಸಭೆಯಲ್ಲಿ 4ನೇ ಆಸನ ಮರು ಪಡೆದ ಗಡ್ಕರಿ, 4ನೇ ಸಾಲಿನಲ್ಲಿ ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: 18ನೇ ಲೋಕಸಭೆಯಲ್ಲಿ ಆಸನ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಆಸನವನ್ನು ಉಳಿಸಿಕೊಂಡಿದ್ದು, ಹೊಸದಾಗಿ ಆಯ್ಕೆಯಾದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಗೆ ನಾಲ್ಕನೇ ಸಾಲಿನಲ್ಲಿ ಆಸನ ಕಲ್ಪಿಸಲಾಗಿದೆ.
ಲೋಕಸಭೆಯ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಸಾಲಿನ 1ನೇ ನಂಬರ್ ಆಸನವನ್ನು ನಿಗದಿಪಡಿಸಲಾಗಿದೆ. ಅರ್ಧ ವೃತ್ತಾಕಾರದ ಸಭಾಂಗಣದ ಮತ್ತೊಂದು ಭಾಗದ ಮುಂದಿನ ಸಾಲಿನಲ್ಲಿ ಎದುರಿನ ಆಸನವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಮೀಸಲಿಡಲಾಗಿದ್ದು, ಅವರು ಆಸನ ಸಂಖ್ಯೆ 498ನ್ನು ಪಡೆದುಕೊಂಡಿದ್ದಾರೆ.
ಆಸನ ಸಂಖ್ಯೆ 1ರಲ್ಲಿ ಪ್ರಧಾನಿ ಮೋದಿ ಅವರ ಆಸನವು ಬದಲಾಗದೆ ಉಳಿದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕ್ರಮವಾಗಿ ಆಸನ ಸಂಖ್ಯೆ 2 ಮತ್ತು 3ನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಆಸನ ಸಂಖ್ಯೆ 58ನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ನೀಡಲಾಗಿತ್ತು. ಸೋಮವಾರ ಈ ಆಸನದ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ನಿತಿನ್ ಗಡ್ಕರಿಗೆ ಆಸನ ಸಂಖ್ಯೆ 4ನ್ನು ಮರುಹಂಚಿಕೆ ಮಾಡಲಾಗಿದೆ.
ಸಮಾಜವಾದಿ ಪಕ್ಷದ(ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಆಸನ ಸಂಖ್ಯೆ 355 ಮತ್ತು ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರಿಗೆ ಆಸನ ಸಂಖ್ಯೆ 354 ನಿಗದಿಪಡಿಸಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರು ಆಸನ ಸಂಖ್ಯೆ 497ರಲ್ಲಿ ರಾಹುಲ್ ಗಾಂಧಿಯವರ ಪಕ್ಕದ ಆಸನ ಪಡೆದುಕೊಂಡಿದ್ದಾರೆ.
ವಯನಾಡ್ ಸಂಸದರಾಗಿ ಪಾದಾರ್ಪಣೆ ಮಾಡುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನಾಲ್ಕನೇ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಲಾಗಿದೆ. ಅವರಿಗೆ ಆಸನ ಸಂಖ್ಯೆ 517ನ್ನು ನೀಡಲಾಗಿದೆ.