ಕೈದಿಗಳಿಗೆ ಜಾತಿ ಆಧಾರಿತ ತಾರತಮ್ಯ ಮಾಡುವಂತಿಲ್ಲ: ಜೈಲು ಕೈಪಿಡಿ ತಿದ್ದುಪಡಿ ಮಾಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ಜೈಲುಗಳಲ್ಲಿ ಕೈದಿಗಳಿಗೆ ಜಾತಿಯ ಆಧಾರದ ಮೇಲೆ ಕರ್ತವ್ಯ ಅಥವಾ ಕೆಲಸದ ಹಂಚಿಕೆಯಲ್ಲಿ ತಾರತಮ್ಯ ಮತ್ತು ವರ್ಗೀಕರಣ ಮಾಡುವುದನ್ನು ತಡೆಯಲು ಕೇಂದ್ರ ಗೃಹ ಸಚಿವಾಲಯವು ಜೈಲು ಕೈಪಿಡಿ ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಕೇಂದ್ರ ಗೃಹ ಸಚಿವಾಲಯವು ಪತ್ರವನ್ನು ಬರೆದಿದ್ದು, ಜೈಲು ಅಧಿಕಾರಿಗಳು ಯಾವುದೇ ತಾರತಮ್ಯ, ವರ್ಗೀಕರಣ ಮತ್ತು ಜಾತಿಯ ಆಧಾರದ ಮೇಲೆ ಕೈದಿಗಳನ್ನು ಪ್ರತ್ಯೇಕಿಸದಂತೆ ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
'ಮಾದರಿ ಜೈಲು ಕೈಪಿಡಿ-2016' ಮತ್ತು ʼModel Prisons and Correctional Services Act-2023ʼಕ್ಕೆ ತಿದ್ದುಪಡಿ ಮಾಡಲಾಗಿದೆ. ಜೈಲುಗಳಲ್ಲಿ ಕೈದಿಗಳ ಜಾತಿಯ ಆಧಾರದ ಮೇಲೆ ಯಾವುದೇ ಕರ್ತವ್ಯ ಅಥವಾ ಕೆಲಸದ ಹಂಚಿಕೆಯಲ್ಲಿ ತಾರತಮ್ಯ ಇರಬಾರದು ಎಂದು ಸಚಿವಾಲಯ ಹೇಳಿದೆ. ಇದಲ್ಲದೆ ಜೈಲುಗಳೊಳಗಿನ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಅನ್ನು ಮ್ಯಾನುವಲ್ ಸ್ಕ್ಯಾವೆಂಜಿಂಗ್ ಅಥವಾ ಅಪಾಯಕಾರಿ ಶುಚಿಗೊಳಿಸುವಿಕೆಯನ್ನು ನಿರ್ಬಂಧಿಸಿದೆ.
ಜೈಲುಗಳನ್ನು ನಿಯಂತ್ರಿಸುವ ಮೂಲ ತತ್ವಗಳಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಜನವರಿ 2016ರಲ್ಲಿ ಮಾದರಿ ಕೈಪಿಡಿಯನ್ನು ಸಿದ್ಧಪಡಿಸಿತ್ತು.