ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆ: ರಫ್ತಿನ ಮೇಲೆ 40% ಸುಂಕ
ಹೊಸದಿಲ್ಲಿ: ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ರಫ್ತಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡ 40ರಷ್ಟು ಸುಂಕ ವಿಧಿಸಿ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. ಇದು ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ.
ಈ ತಿಂಗಳು ಆರಂಭದಿಂದಲೇ ಈರುಳ್ಳಿ ಬೆಲೆ ನಿಯತವಾಗಿ ಏರುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಕೂಡಾ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. ಆಗಸ್ಟ್ ಆರಂಭದಿಂದ ಇದುವರೆಗೆ ಏರುಮುಖದಲ್ಲಿದ್ದ ಟೊಮ್ಯಾಟೊ ಬೆಲೆ ಇದೀಗ ಇಳಿಯತೊಡಗಿದ್ದು, ಆಲೂಗಡ್ಡೆ ಮತ್ತು ಈರುಳ್ಳಿ ಬೆಲೆ ಏರಿಕೆ ಆರಂಭವಾಗಿದೆ ಎಂದು ಆರ್ಬಿಐ ಬುಲೆಟಿನ್ ಹೇಳಿದೆ.
ಆಗಸ್ಟ್ 11ರಿಂದ ಕೇಂದ್ರ ಸರ್ಕಾರ ತನ್ನ ದಾಸ್ತಾನಿನಿಂದ ಈರುಳ್ಳಿ ಬಿಡುಗಡೆ ಮಾಡುತ್ತಿದೆ. 2023-24ನೇ ಋತುವಿನಲ್ಲಿ ಸರ್ಕಾರ 3 ಲಕ್ಷ ಟನ್ ಈರುಳ್ಲಿ ದಾಸ್ತಾನು ಮಾಡಲು ನಿರ್ಧರಿಸಿದೆ. 2022-23ರಲ್ಲಿ ಸರ್ಕಾರ 2.51 ಲಕ್ಷ ಟನ್ ಈರುಳ್ಳಿ ಬಫರ್ ಸ್ಟಾಕ್ ನಿರ್ವಹಿಸಿತ್ತು. ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತು ಪೂರೈಕೆ ಅತ್ಯಂತ ಕನಿಷ್ಠ ಇರುವ ಸಮಯದಲ್ಲಿ ಗಗನಕ್ಕೇರುವ ಬೆಲೆ ಸ್ಥಿರೀಕರಣದ ಸಲುವಾಗಿ ದಾಸ್ತಾನು ನಿರ್ವಹಿಸಲಾಗುತ್ತದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಇತ್ತೀಚೆಗೆ ನಫೆಡ್ ಮತ್ತು ಎನ್ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಈರುಳ್ಳಿ ವಿಲೇವಾರಿ ವಿಧಿವಿಧಾನವನ್ನು ಅಂತಿಮಗೊಳಿಸಿದ್ದರು.