ಪಾಕಿಸ್ತಾನ | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಹುಟ್ಟೂರಲ್ಲಿ ಶೋಕಾಚರಣೆ
ಗಾಹ್ (ಪಾಕಿಸ್ತಾನ): ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಅವರ ಹುಟ್ಟೂರು, ಪಾಕಿಸ್ತಾನದ ಗಾಹ್ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
"ನಮ್ಮ ಕುಟುಂಬದ ಯಾರೋ ಒಬ್ಬರು ಇಂದು ನಿಧನರಾಗಿದ್ದಾರೆಂದು ನಮಗೆ ಅನಿಸುತ್ತಿದೆ" ಎಂದು ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸ್ಥಳೀಯ ಶಿಕ್ಷಕ ಅಲ್ತಾಫ್ ಹುಸೇನ್ ಅವರು ಸಂತಾಪ ವ್ಯಕ್ತಪಡಿಸಿದರು.
ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಲು ಸ್ಥಳೀಯ ನಿವಾಸಿಗಳ ಗುಂಪೊಂದು ಸಭೆ ನಡೆಸುತ್ತಿರುವ ನಡುವೆ ಪಿಟಿಐ ಜೊತೆ ಮಾತನಾಡಿದ ಅಲ್ತಾಫ್ ಹುಸೇನ್, ʼಇಡೀ ಗ್ರಾಮವು ಶೋಕದಲ್ಲಿದೆʼ ಎಂದರು.
ಅಲ್ತಾಫ್ ಹುಸೇನ್ ಅವರು, ಮನಮೋಹನ್ ಸಿಂಗ್ 4 ನೇ ತರಗತಿಯವರೆಗೆ ಅಧ್ಯಯನ ಮಾಡಿದ ಗಾಹ್ ಗ್ರಾಮದ ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಬಟ್ಟೆ ವ್ಯಾಪಾರಿಯಾಗಿದ್ದ ತಂದೆ ಗುರುಮುಖ್ ಸಿಂಗ್ ಮತ್ತು ತಾಯಿ ಅಮ್ರತ್ ಕೌರ್ ಅವರಿಗೆ ಗಾಹ್ ಗ್ರಾಮದಲ್ಲಿ ಹುಟ್ಟಿದ ಮನಮೋಹನ್ ಸಿಂಗ್ ಅವರನ್ನು, ಅವರ ಸ್ನೇಹಿತರು ಅವರನ್ನು 'ಮೋಹ್ನಾ' ಎಂದು ಕರೆಯುತ್ತಿದ್ದರು.
ಈ ಗ್ರಾಮವು ರಾಜಧಾನಿ ಇಸ್ಲಾಮಾಬಾದ್‌ನಿಂದ ನೈಋತ್ಯಕ್ಕೆ ಸುಮಾರು 100 ಕಿ.ಮೀ ದೂರದಲ್ಲಿದೆ. ಸಿಂಗ್ ಅವರು ಜನಿಸಿದಾಗ ಝೀಲಂ ಜಿಲ್ಲೆಯ ಭಾಗವಾಗಿದ್ದ ಈ ಗ್ರಾಮವು, 1986 ರಲ್ಲಿ ಚಕ್ವಾಲ್ ಜಿಲ್ಲೆಗೆ ಸೇರಿಸಲಾಯಿತು.
ಪಾಕಿಸ್ತಾನದ ಚಕ್ವಾಲ್ ಜಿಲ್ಲೆಯ ಗಾಹ್ ಗ್ರಾಮದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪೂರ್ವಜರ ಗ್ರಾಮದ ಸ್ಥಳೀಯರು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.
ಸಿಂಗ್ ಅವರನ್ನು ಭೇಟಿ ಮಾಡಲು 2008 ರಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ಶಾಲಾ ಸಹಪಾಠಿ ರಾಜಾ ಮುಹಮ್ಮದ್ ಅಲಿ ಅವರ ಸೋದರಳಿಯ ರಾಜಾ ಆಶಿಕ್ ಅಲಿ ಅವರು ಸಂತಾಪ ಸಭೆಯನ್ನುದ್ದೇಶಿಸಿ ಮಾತನಾಡಿದರು.
"ಈ ಎಲ್ಲಾ ಗ್ರಾಮಸ್ಥರು ತೀವ್ರವಾಗಿ ದುಃಖಿತರಾಗಿದ್ದಾರೆ. ಅವರು ಭಾರತದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಆದರೆ ಅದು ಸಾಧ್ಯವಿಲ್ಲ. ಆದ್ದರಿಂದ ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಲು ಇಲ್ಲಿ ಸೇರಿದ್ದಾರೆ" ಎಂದು ಅವರು ಹೇಳಿದರು.
2004 ರಲ್ಲಿ ಸಿಂಗ್ ಅವರು ಪ್ರಧಾನಿಯಾದಾಗ ಅಲ್ಲಿದ್ದ ಕೆಲವು ಸಹಪಾಠಿಗಳು ಈಗ ನಿಧನರಾಗಿದ್ದಾರೆ. ಆದರೆ ಅವರ ಕುಟುಂಬಗಳು ಇನ್ನೂ ಗಾಹ್‌ನಲ್ಲಿ ವಾಸಿಸುತ್ತಿದ್ದು, ಕುಟುಂಬದೊಂದಿಗಿನ ಹಳೆಯ ಸಂಪರ್ಕವನ್ನು ಮೆಲುಕು ಹಾಕುತ್ತಿದ್ದಾರೆ.
"ನಮ್ಮ ಹಳ್ಳಿಯ ಹುಡುಗನೊಬ್ಬ ಭಾರತದ ಪ್ರಧಾನಿಯಾಗಿದ್ದಾನೆ ಎಂದು ಹಳ್ಳಿಯ ಪ್ರತಿಯೊಬ್ಬರೂ ಹೆಮ್ಮೆಪಡುತ್ತಿದ್ದ ದಿನಗಳ ನೆನಪಿನಲ್ಲೇ ನಾವು ಇನ್ನೂ ಮುಳುಗಿದ್ದೇವೆ" ಎಂದು ಆಶಿಕ್ ಅಲಿ ಹೇಳಿದರು.
ಹಳ್ಳಿಯಲ್ಲೇ ಅತ್ಯಂತ ಪ್ರಸಿದ್ಧ ಸ್ಥಳವೆಂದರೆ ಮನಮೋಹನ್ ಸಿಂಗ್ ಅವರು ತನ್ನ ಆರಂಭಿಕ ಶಿಕ್ಷಣವನ್ನು ಪಡೆದ ಶಾಲೆ. ಈ ಶಾಲೆಗೆ ಮನಮೋಹನ್ ಸಿಂಗ್ ಅವರ ಹೆಸರು ಇಡುವ ಬಗ್ಗೆಯೂ ಮಾತುಕತೆಗಳು ನಡೆಯುತ್ತಿದೆ ಎಂದೂ ಸ್ಥಳೀಯರು ಹೇಳಿದರು.
ಶಾಲಾ ರಿಜಿಸ್ಟರ್‌ನಲ್ಲಿ ಅವರ ಪ್ರವೇಶ ಸಂಖ್ಯೆ 187 ಆಗಿದ್ದು, ಏಪ್ರಿಲ್ 17, 1937 ರಂದು ಶಾಲೆಗೆ ಸೇರಿರುವುದಾಗಿ ನಮೂದಾಗಿದೆ. ಅವರ ಜನ್ಮ ದಿನಾಂಕವನ್ನು ಫೆಬ್ರವರಿ 4, 1932 ಎಂದು ನಮೂದಿಸಲಾಗಿದೆ. ಭಾರತದಲ್ಲಿ ಮನಮೋಹನ್ ಸಿಂಗ್ ಅವರ ಬೆಳವಣಿಗೆಯು ಸ್ಥಳೀಯ ಅಧಿಕಾರಿಗಳನ್ನು ಗ್ರಾಮದ ಅಭಿವೃದ್ಧಿಯತ್ತ ಗಮನಹರಿಸಲು ಪ್ರೇರೇಪಿಸಿತು ಎಂದು ಸ್ಥಳೀಯರು ಹೇಳುತ್ತಾರೆ.
ಭಾರತ-ಪಾಕ್ ವಿಭಜನೆಗೆ ಸ್ವಲ್ಪ ಮುನ್ನ, ಕುಟುಂಬವು ಅಮೃತಸರಕ್ಕೆ ಸ್ಥಳಾಂತರಗೊಂಡಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ಮನಮೋಹನ್ ಸಿಂಗ್ ತಮ್ಮ ಸ್ನೇಹಿತರಲ್ಲಿ ಒಬ್ಬರಾದ ರಾಜಾ ಮುಹಮ್ಮದ್ ಅಲಿಯನ್ನು 2008 ರಲ್ಲಿ ತಮ್ಮನ್ನು ಭೇಟಿ ಮಾಡಲು ದೆಹಲಿಗೆ ಆಹ್ವಾನಿಸಿದ್ದರು. ಅಲಿ 2010 ರಲ್ಲಿ ನಿಧನರಾದರೆ, ನಂತರದ ವರ್ಷಗಳಲ್ಲಿ ಇತರ ಒಂದಿಬ್ಬರು ಸ್ನೇಹಿತರು ಸಹ ನಿಧನರಾದರು.
"ಡಾ. ಮನಮೋಹನ್ ಸಿಂಗ್ ತಮ್ಮ ಜೀವಿತಾವಧಿಯಲ್ಲಿ ಗಾಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಈಗ ಅವರು ಇಲ್ಲದಿರುವಾಗ, ಅವರ ಕುಟುಂಬದಿಂದ ಯಾರಾದರೂ ಈ ಗ್ರಾಮಕ್ಕೆ ಭೇಟಿ ನೀಡಬೇಕೆಂದು ನಾವು ಬಯಸುತ್ತೇವೆ" ಎಂದು ಅಲ್ತಾಫ್ ಹುಸೇನ್ ಹೇಳಿದರು.