ರಾಜಸ್ಥಾನದ ಜನರು ಭಾರತ್ ಜೋಡೊ ಸಂದೇಶಕ್ಕೆ ಮತ ನೀಡಲಿದ್ದಾರೆ: ಕಾಂಗ್ರೆಸ್

Update: 2023-11-12 18:53 GMT

Photo: PTI

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತೇವೆ ಎಂದು ಕಾಂಗ್ರೆಸ್‌ ವಿಶ್ವಾಸ ವ್ಯಕ್ತಪಡಿಸಿದೆ. ನರೇಂದ್ರ ಮೋದಿ ಸರ್ಕಾರದಿಂದ ಉಂಟಾಗಿರುವ ಅಸಮಾನತೆ, ನಿರುದ್ಯೋಗ ಹಾಗೂ ರಾಜಕೀಯ ಸರ್ವಾಧಿಕಾರ ವಿರುದ್ಧ ಹೋರಾಟ ನಡೆಸುವ ಭಾರತ್ ಜೋಡೊ ಯಾತ್ರೆಯ ಸಂದೇಶದ ಪರ ಜನರು ಮತ ಚಲಾಯಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಶನಿವಾರ ಮಧ‍್ಯಾಹ್ಯ ಭಾರತ್ ಜೋಡೊ ಬ್ರಿಗೇಡ್ ನೊಂದಿಗೆ ಜೈಪುರವನ್ನು ಹಾದು ಹೋಗುವಾಗ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನದಲ್ಲಿ ಹಾದು ಹೋಗಿದ್ದ 485 ಕಿಮೀ ಉದ್ದದ ಭಾರತ್ ಜೋಡೊ ಯಾತ್ರೆಯ ನೆನಪು ಮರುಕಳಿಸಿತು ಎಂದು ಹೇಳಿದ್ದಾರೆ.

ಈ ಯಾತ್ರೆಯ ದೀರ್ಘಾವಧಿಯು ಮರುಳುಗಾಡು ರಾಜ್ಯವೇ ಆಗಿದ್ದುದರಿಂದ ಇದು ಸಹಜವಾಗಿದೆ ಎಂದೂ ಅವರು ಹೇಳಿದ್ದಾರೆ.

“ಕನ್ಯಾಕುಮಾರಿಯಿಂದ ಕಾಶ‍್ಮೀರದವರೆಗೆ ನಡೆದ 4,000 ಕಿಮೀ ಉದ್ದದ ಭಾರತ್ ಜೋಡೊ ಯಾತ್ರೆಯು ಕೇವಲ ಒಂದು ಕಾರ್ಯಕ್ರಮವಲ್ಲ; ಬದಲಿಗೆ ಒಂದು ಚಾರಿತ್ರಿಕ ಹೋರಾಟ. ಈ ಪ್ರವಾಸದಿಂದ ರಾಜಸ್ಥಾನದಲ್ಲಿನ ಕಾಂಗ್ರೆಸ್ ಹಾಗೂ ಭಾರತದ ಇನ್ನಿತರ ಭಾಗಗಳಲ್ಲಿನ ರಾಜಕೀಯ ಭವಿಷ್ಯದ ಮೇಲೆ ತೀವ್ರ ಸ್ವರೂಪದ ಪರಿಣಾಮವುಂಟಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ನ.25ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತನ್ನ ಪರಿವರ್ತನೀಯ ಯೋಜನೆಗಳ ಮೂಲಕ ಬಿಜೆಪಿಯ ಜನವಿರೋಧಿ ನೀತಿಗಳಿಂದ ನಿರಾಳತೆ ತಂದಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಜನರು ಮತ ನೀಡಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಮುಂದಿನ ಅವಧಿಗೆ ಕಾಂಗ್ರೆಸ್ ನೀಡಿರುವ ಏಳು ಗ್ಯಾರಂಟಿಗಳಿಗೂ ರಾಜ್ಯದ ಜನತೆ ಮತ ನೀಡಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವರೂ ಆದ ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.

200 ಮಂದಿ ಸದಸ್ಯ ಬಲದ ರಾಜಸ್ಥಾನ ವಿಧಾನಸಭಾ ಚುನಾವಣೆಯು ನ. 25ರಂದು ನಡೆಯಲಿದ್ದು, ಡಿ.3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News