ಕೇರಳದಲ್ಲಿ ಎಡ ಪಕ್ಷಗಳ ವಿರುದ್ಧ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ
ತಿರುವನಂತಪುರಂ: ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೋಮವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ. ಈ ಕ್ಷೇತ್ರದಿಂದ ʼಇಂಡಿಯಾʼ ಮೈತ್ರಿಕೂಟದ ಅಂಗಪಕ್ಷವಾಗಿರುವ ಸಿಪಿಐನ ಅಣ್ಣಿ ರಾಜಾ ಅವರು ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, ಕೇರಳಗೆ ಬಂದು ಸ್ಪರ್ಧಿಸುವ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಹೋರಾಡದ ರಾಹುಲ್ ಗಾಂಧಿ ನಿರ್ಧಾರವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
“ಇದರ ಅರ್ಥವೇನು? ರಾಹುಲ್ ಗಾಂಧಿ ಇಂಡಿಯಾ ಮೈತ್ರಿಕೂಟದ ಮುಖ್ಯ ನಾಯಕರಾಗಿದ್ದು, ಅದೇ ಮೈತ್ರಿಕೂಟದ ಭಾಗವಾಗಿರುವ ಎಡ ಪ್ರಜಾಸತ್ತಾತ್ಮಕ ರಂಗದ ವಿರುದ್ಧ ಅವರು ಸ್ಪರ್ಧಿಸುತ್ತಿದ್ದಾರೆ” ಎಂದು ಅವರು ಕಿಡಿ ಕಾರಿದರು.
“ಕೇರಳದಲ್ಲಿ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಯಾರು? ಅವರೇನಾದರೂ ಕೇರಳದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆಯೆ? ಅವರು ಬಿಜೆಪಿಯ ವಿರುದ್ಧ ಹೋರಾಡಲು ಕೇರಳಕ್ಕೆ ಬಂದಿದ್ದಾರೆ ಎಂದು ನಾವು ಹೇಳಲು ಸಾಧ್ಯವೆ? ಅವರಿಲ್ಲಿ LDF ಅಭ್ಯರ್ಥಿ ವಿರುದ್ಧ ಸ್ಪರ್ಧಿಸಲು ಬಂದಿದ್ದಾರೆ” ಎಂದೂ ಅವರು ಹರಿಹಾಯ್ದರು.
ಬಿಜೆಪಿ ಸತತ ಮೂರನೆಯ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಲು ಇಂಡಿಯಾ ಮೈತ್ರಿಕೂಟವನ್ನು ರಚಿಸಲಾಗಿದೆ ಎಂದು ಅವರು ನೆನಪಿಸಿದರು.
ಕೇರಳದಲ್ಲಿ 20 ಲೋಕಸಭಾ ಕ್ಷೇತ್ರಗಳಿದ್ದು ಎಪ್ರಿಲ್ 26ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.