ಪ್ರಧಾನಿಯಿಂದ ಪುಣೆ ಮೆಟ್ರೋ ವಿಭಾಗ ಉದ್ಘಾಟನೆ, 11,200 ಕೋ.ರೂ. ಯೋಜನೆಗಳಿಗೆ ಶಂಕು ಸ್ಥಾಪನೆ
ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ ಪುಣೆ ಮೆಟ್ರೊ ವಿಭಾಗವನ್ನು ಉದ್ಘಾಟಿಸಿದರು ಹಾಗೂ 11,200 ಕೋ.ರೂ.ನ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಪುಣೆಯಲ್ಲಿ ಭಾರೀ ಮಳೆ ಸುರಿದಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸೆಪ್ಟಂಬರ್ 25ರ ಭೇಟಿಯನ್ನು ರದ್ದುಗೊಳಿಸಲಾಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನಾಯಕತ್ವದ ಅಡಿಯಲ್ಲಿ ಡಬಲ್ ಎಂಜಿನ್ ಸರಕಾರ ಮಹಾರಾಷ್ಟ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಮೆಟ್ರೋ ನಗರಗಳ ಸಂಪರ್ಕಕ್ಕೆ ಗಮನ ಕೇಂದ್ರೀಕರಿಸಿದೆ ಎಂದು ನರೇಂದ್ರ ಮೋದಿ ಹೇಳಿದರು.
‘‘ಪುಣೆ ಮೆಟ್ರೊ ಪರಿಕಲ್ಪನೆ 2008ರಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ, 2016ರಲ್ಲಿ ನಮ್ಮ ಸರಕಾರ ಮೆಟ್ರೋ ಅಭಿವೃದ್ಧಿಗೆ ಕೆಲಸವನ್ನು ಆರಂಭಿಸಿತು. ಈ ಹಿಂದಿನ ಸರಕಾರ ಮೆಟ್ರೋ ಹಾಗೂ ರಸ್ತೆ ಮೂಲಕ ಪ್ರಮುಖ ಸ್ಥಳಗಳ ನಡುವೆ ಸಂಪರ್ಕ ಏರ್ಪಡಿಸಲು ಏನನ್ನೂ ಮಾಡಿಲ್ಲ. ಆದರೆ, ನಮ್ಮ ಸರಕಾರ ಅಭಿವೃದ್ಧಿಗೆ ಮಾತ್ರ ಗಮನ ಕೇಂದ್ರೀಕರಿಸಿದೆ’’ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಸರಕಾರದ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಪುಣೆ ನಗರ ಬೆಳೆಯುತ್ತಿದೆ ಹಾಗೂ ನಗರದ ಜನಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಆದುದರಿಂದ ಮೆಟ್ರೋ ನಗರಗಳಲ್ಲಿ ವಾಸಿಸುವವರ ಜೀವನ ಸುಗಮಗೊಳಿಸಲು ಎಲ್ಲಾ ಮೂಲಭೂತ ಸೌಕರ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ಪುಣೆ ಮೆಟ್ರೋ ರೈಲು ಯೋಜನೆ (ಹಂತ 2) ಪೂರ್ಣಗೊಂಡ ಗುರುತಾಗಿ ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ವರೆಗೆ ಪುಣೆ ಮೆಟ್ರೋ ವಿಭಾಗವನ್ನು ಮೋದಿ ಅವರು ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ಜಿಲ್ಲಾ ನ್ಯಾಯಾಲಯ ಹಾಗೂ ಸ್ವರ್ಗೇಟ್ ನಡುವಿನ ಭೂಗತ ವಿಭಾಗದ ವೆಚ್ಚ ಸುಮಾರು 1,810 ಕೋ.ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 2.995 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿರುವ ಪುಣೆ ಮೆಟ್ರೊ ಹಂತ-1ರ ಸ್ವರ್ಗೇಟ್-ಕಟ್ರಾಜ್ ವಿಸ್ತರಣೆಗೆ ಮೋದಿ ಅವರು ಶಂಕು ಸ್ಥಾಪನೆ ಕೂಡ ನೆರವೇರಿಸಿದರು.
ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರ್‌ನ 20 ಕಿ.ಮೀ. ದಕ್ಷಿಣದಲ್ಲಿರುವ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯ 7,855 ಎಕರೆ ವ್ಯಾಪಿಸಿರುವ ರೂಪಾಂತರ ಯೋಜನೆಯನ್ನು ಬಿಡ್ಕಿನ್ ಕೈಗಾರಿಕಾ ಪ್ರದೇಶದಲ್ಲಿ ಮೋದಿ ಅವರು ಉದ್ಘಾಟಿಸಿದರು.
ಸಂಪರ್ಕವನ್ನು ಗಣನೀಯವಾಗಿ ಸುಧಾರಿಸುವ ಹಾಗೂ ಪ್ರಯಾಣಿಕರು, ಉದ್ಯಮಿಗಳು, ಪ್ರವಾಸಿಗರು ಹಾಗೂ ಹೂಡಿಕೆದಾರರಿಗೆ ಸೋಲಾಪುರಕ್ಕೆ ಹೆಚ್ಚು ಸಂಪರ್ಕ ಸಾಧ್ಯವಾಗುವ ಸೋಲಾಪುರ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಭಿಡೆವಾಡದಲ್ಲಿ ಕ್ರಾಂತ್ರಿಜ್ಯೋತಿ ಸಾವಿತ್ರಿ ಬಾ ಪುಲೆ ಸ್ಮಾರಕ ಮೊದಲ ಹೆಣ್ಣು ಮಕ್ಕಳ ಶಾಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.