ಮಡ್ಗಾಂವ್ ಗೆ ಪ್ರಧಾನಿ ಭೇಟಿ | ಶಾಲೆಗಳು ಬಂದ್, ಕಾಲೇಜುಗಳಿಗೆ ಅರ್ಧ ದಿನ ರಜೆ: ಪ್ರತಿಪಕ್ಷಗಳ ವಿರೋಧ
ಪಣಜಿ: ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಗೋವಾದ ಮಡ್ಗಾಂವ್ನಲ್ಲಿ ಮಂಗಳವಾರ ಮಧ್ಟಾಹ್ನದ ಆನಂತರ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಶಾಲೆಗಳಿಗೆ ಇಡೀ ದಿನ ರಜೆಯನ್ನು ಸಾರಲಾಗಿತ್ತು. ಗೋವಾ ಸರಕಾರದ ಈ ನಡೆಯನ್ನು ಕಾಂಗ್ರೆಸ್ ಸೇರಿದಂದೆ ವಿವಿಧ ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ.
ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 6ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾಲೇಜುಗಳನ್ನು ಮಧ್ಯಾಹ್ನ 12ರೊಳಗೆ ಮುಚ್ಚಬೇಕಾಗಿದೆ. ಈ ಸಂಬಂಧ ಪ್ರಧಾನಿಯ ಸಭೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ವಿದ್ಯಾರ್ಥಿಗಳನ್ನು ಮಧ್ಯಾಹ್ನ 1 ಗಂಟೆಯೊಳಗೆ ಮಡ್ಗಾಂವ್ ಕದಂಬ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಕಳುಹಿಸಿಕೊಡಬೇಕು ಎಂದು ಗೋವಾ ಸರಕಾರದ ಉನ್ನತ ಶಿಕ್ಷಣ ನಿರ್ದೇಶನಾಲಯವು ಕಾಲೇಜುಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಗೋವಾ ಸರಕಾರದ ಈ ನಡೆಯನ್ನು ಟೀಕಿಸಿದೆ.
ಇದಕ್ಕೂ ಮುನ್ನ ಮಡ್ಗಾಂವ್ ನ ಕದಂಬ ಸರಕಾರಿ ಸಾರಿಗೆ ಬಸ್ ನಿಲ್ದಾಣದ ಸಮೀಪ ಪ್ರಧಾನಿ ಭಾಷಣ ಮಾಡುವ ಸ್ಥಳದಲ್ಲಿದ್ದ ಮೂರು ಹಳೆಯ ಮರಗಳನ್ನು ಕಡಿದುರುಳಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.