ಪುಣೆ | ಸಾರ್ವಜನಿಕ ಸ್ಥಳದಲ್ಲೇ ಬಿಪಿಒ ಉದ್ಯೋಗಿಯಿಂದ ಮಹಿಳಾ ಸಹೋದ್ಯೋಗಿಯ ಕೊಲೆ : ವೀಡಿಯೊ ವೈರಲ್

Update: 2025-01-09 11:33 GMT

PC :  X 

ಪುಣೆ : ಯರವಾಡ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಬಿಪಿಒ ಉದ್ಯೋಗಿಯೋರ್ವ ತನ್ನ ಮಹಿಳಾ ಸಹೋದ್ಯೋಗಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜನವರಿ 7ರಂದು ಸಂಜೆ 6:15ರ ಸುಮಾರಿಗೆ ಯರವಾಡದಲ್ಲಿರುವ ಬಿಪಿಒ (BPO) ಸಂಸ್ಥೆ ʼWNS ಗ್ಲೋಬಲ್ ಸರ್ವಿಸಸ್ʼ ನ ಪಾರ್ಕಿಂಗ್ ಸ್ಥಳದಲ್ಲಿ ಘಟನೆ ಸಂಭವಿಸಿದೆ. ಸಂತ್ರಸ್ತ ಮಹಿಳೆಯನ್ನು ಕಾಟ್ರಾಜ್ ನಿವಾಸಿ ಶುಭದಾ ಶಂಕರ ಕೊಡಾರೆ(28) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಶಿವಾಜಿನಗರ ನಿವಾಸಿ ಕೃಷ್ಣ ಸತ್ಯನಾರಾಯಣ ಕನೋಜ(30) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿ ಬಹುರಾಷ್ಟ್ರೀಯ ಬಿಪಿಒ ಸಂಸ್ಥೆ WNS ಗ್ಲೋಬಲ್ ನಲ್ಲಿ ಅಕೌಂಟೆಂಟ್ ಗಳಾಗಿ ಕೆಲಸ ಮಾಡುತ್ತಿದ್ದರು.

ಡಿಸಿಪಿ ಹಿಮ್ಮತ್ ಜಾಧವ್ ಈ ಕುರಿತು ಪ್ರತಿಕ್ರಿಯಿಸಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ತಡರಾತ್ರಿ ಯರವಾಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಸಂತ್ರಸ್ತೆಗೆ ಹಣವನ್ನು ನೀಡಿದ್ದು, ಅದನ್ನು ಹಿಂತಿರುಗಿಸದ ಕಾರಣ ಆತ ಕೃತ್ಯವನ್ನು ಎಸಗಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News