ಇಂಡಿಯಾ ಮೈತ್ರಿಕೂಟದ ಉದ್ದೇಶ ಸಂಸತ್ ಚುನಾವಣೆಗೆ ಸೀಮಿತವಾಗಿದ್ದರೆ, ಅದನ್ನು ವಿಸರ್ಜಿಸಬೇಕು: ಉಮರ್ ಅಬ್ದುಲ್ಲಾ
ಹೊಸದಿಲ್ಲಿ: ಐಎನ್‌ಡಿಎ ಮೈತ್ರಿಕೂಟವು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ ಎಂಬ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಮೈತ್ರಿಕೂಟದ ರಚನೆಯ ಉದ್ದೇಶವು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿದ್ದರೆ, ಮೈತ್ರಿಕೂಟವನ್ನು ವಿಸರ್ಜಿಸುವುದು ಉತ್ತಮ ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವಿನ ತ್ರಿಕೋಣ ಸ್ಪರ್ಧೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಒಮರ್ ಅಬ್ದುಲ್ಲಾ, ʼಈ ಬಗ್ಗೆ ನಾನು ಏನನ್ನೂ ಹೇಳಲಾರೆ, ಏಕೆಂದರೆ ನಮಗೆ ದಿಲ್ಲಿ ಚುನಾವಣೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಇತರ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಹೇಗೆ ಪರಿಣಾಮಕಾರಿಯಾಗಿ ಹೋರಾಡಬಹುದು ಎಂಬುದನ್ನು ನಿರ್ಧರಿಸಬೇಕು. ಕಳೆದ ಎರಡು ಚುನಾವಣೆಗಳಲ್ಲಿ, ಎಎಪಿ ಯಶಸ್ವಿಯಾಗಿತ್ತು. ದಿಲ್ಲಿ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ನೋಡಲು ನಾವು ಕಾಯಬೇಕಾಗುತ್ತದೆʼ ಎಂದು ಅವರು ಹೇಳಿದರು.
"ನನಗೆ ನೆನಪಿರುವಂತೆ, ಇಂಡಿಯಾ ಮೈತ್ರಿಕೂಟಕ್ಕೆ ಯಾವುದೇ ಸಮಯದ ಮಿತಿ ಇರಲಿಲ್ಲ. ದುರದೃಷ್ಟವಶಾತ್, (ಲೋಕಸಭಾ ಚುನಾವಣೆಯ ಬಳಿಕ) ಇಂಡಿಯಾ ಮೈತ್ರಿಕೂಟದ ಸಭೆಯನ್ನು ಆಯೋಜಿಸಲಾಗಿಲ್ಲ, ಆದ್ದರಿಂದ ನಾಯಕತ್ವ, ಕಾರ್ಯಸೂಚಿ ಅಥವಾ ನಮ್ಮ (ಮೈತ್ರಿಕೂಟದ) ಅಸ್ತಿತ್ವದ ಬಗ್ಗೆ ಸ್ಪಷ್ಟತೆ ಇಲ್ಲ, ಸಂಸತ್ ಚುನಾವಣೆಗೆ ಮಾತ್ರ ಮೈತ್ರಿಕೂಟವಾಗಿದ್ದರೆ, ಮೈತ್ರಿಕೂಟವನ್ನು ಮುಕ್ತಾಯಗೊಳಿಸಬೇಕು" ಎಂದು ಅಬ್ದುಲ್ಲಾ ಹೇಳಿದ್ದಾರೆ.
ಬುಧವಾರ, ತೇಜಸ್ವಿ ಯಾದವ್ ಅವರು ದಿಲ್ಲಿ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುವ ಬಗ್ಗೆ ಕೇಳಿದಾಗ, "ಇದು ಅಸಾಮಾನ್ಯವೇನಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಮುಖ್ಯ ಧ್ಯೇಯವಾಗಿತ್ತು. ಇಂಡಿಯಾ ಬಣದ ಮೈತ್ರಿ ಆ ಧ್ಯೇಯಕ್ಕೆ ಸೀಮಿತವಾಗಿತ್ತು. ಆದರೆ ಈಗ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಘರ್ಷಣೆ ನಡೆಸುವುದು ಅಸ್ವಾಭಾವಿಕವಲ್ಲ" ಎಂದು ಅವರು ಹೇಳಿದ್ದರು.