ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ದೇಶ ವಿರೋಧಿ ಹೆಜ್ಜೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಲ್ಯಾಟರಲ್ ಎಂಟ್ರಿ ಮೂಲಕ ಸರಕಾರಿ ಉದ್ಯೋಗಿಗಳನ್ನು ನೇಮಕ ಮಾಡುವ ಸರಕಾರದ ಕ್ರಮ ‘ದೇಶ ವಿರೋಧಿ ಹೆಜ್ಜೆ’ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ರವಿವಾರ ವ್ಯಾಖ್ಯಾನಿಸಿದ್ದಾರೆ.
ಈ ಕ್ರಮದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬಹಿರಂಗವಾಗಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸರಕಾರಿ ಉದ್ಯೋಗಿಗಳನ್ನು ಕೇಂದ್ರ ಲೋಕಸೇವಾ ಆಯೋಗದ ಮೂಲಕ ನೇಮಕ ಮಾಡುವ ಬದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ವಿವಿಧ ಕೇಂದ್ರ ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಹಾಗೂ ಉಪ ಕಾರ್ಯದರ್ಶಿಗಳ ಹುದ್ದೆಗಳಿಗೆ 45 ತಜ್ಞರು ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದ ಬಳಿಕ ರಾಹುಲ್ ಗಾಂಧಿ ಈ ವಾಗ್ದಾಳಿ ನಡೆಸಿದ್ದಾರೆ.
‘‘ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳ ಪ್ರಮುಖ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬಹಿರಂಗವಾಗಿ ಕಸಿದುಕೊಳ್ಳಲಾಗುತ್ತಿದೆ’’ ಎಂದು ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘‘ಉನ್ನತ ಅಧಿಕಾರಿಗಳು ಸೇರಿದಂತೆ ದೇಶದ ಎಲ್ಲಾ ಉನ್ನತ ಹುದ್ದೆಗಳನ್ನು ಹಿಂದುಳಿದವರು ಪ್ರತಿನಿಧಿಸುತ್ತಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ. ಇದನ್ನು ಸುಧಾರಿಸುವ ಬದಲು ಲ್ಯಾಟರಲ್ ಎಂಟ್ರಿ ಮೂಲಕ ಅವರನ್ನು ಉನ್ನತ ಹುದ್ದೆಗಳಿಂದ ಇನ್ನಷ್ಟು ದೂರ ತಳ್ಳಲಾಗುತ್ತಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.
‘‘ಇದು ಯುಪಿಎಸ್‌ಸಿಗೆ ತರಬೇತಿ ನಡೆಸುತ್ತಿರುವ ಪ್ರತಿಭಾವಂತ ಯುವ ಜನರ ಹಕ್ಕುಗಳ ದರೋಡೆ ಹಾಗೂ ಹಿಂದುಳಿದವರ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇಲಿನ ದಾಳಿ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.