ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಾದಕ್ಕೆ ಕಾರಣವಾದ ರಾಹುಲ್ ಗಾಂಧಿ ಆಸನ ವ್ಯವಸ್ಥೆ; ಸರಕಾರ ಹೇಳಿದ್ದೇನು?
ಹೊಸದಿಲ್ಲಿ: 78ನೇ ಸ್ವಾತಂತ್ರ್ಯ ದಿನಾಚರಣೆಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅದ್ದೂರಿಯಾಗಿ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಹಾಜರಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಒಲಿಂಪಿಕ್ ಪದಕ ವಿಜೇತರೊಂದಿಗೆ ಎರಡನೆಯ ಕೊನೆ ಸಾಲಿನಲ್ಲಿ ಆಸೀನರಾಗಿದ್ದದ್ದು ವಿವಾದಕ್ಕೆ ಕಾರಣವಾಗಿದೆ. ಕಳೆದ ಒಂದು ದಶಕದಲ್ಲಿ ಇದೇ ಪ್ರಥಮ ಬಾರಿಗೆ ವಿರೋಧ ಪಕ್ಷದ ನಾಯಕರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಬಿಳಿ ಬಣ್ಣದ ಕುರ್ತಾ, ಪೈಜಾಮ ಧರಿಸಿದ್ದ ರಾಹುಲ್ ಗಾಂಧಿ, ಭಾರತೀಯ ಹಾಕಿ ತಂಡದ ಫಾರ್ವರ್ಡ್ ಆಟಗಾರ ಗುರ್ಜಂತ್ ಸಿಂಗ್ ಪಕ್ಕದಲ್ಲಿ ಆಸೀನರಾಗಿರುವುದು ಕಂಡು ಬಂದಿತು.
ಮುಂದಿನ ಸಾಲಿನ ಆಸನಗಳಲ್ಲಿ ಒಲಿಂಪಿಕ್ ಪದಕ ವಿಜೇತರಾದ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಸಹಿತ ಇತರ ಕ್ರೀಡಾಪಟುಗಳು ಆಸೀನರಾಗಿದ್ದರು. ಒಲಿಂಪಿಕ್ ಕಂಚು ವಿಜೇತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಹಾಗೂ ಪಿ.ಆರ್.ಶ್ರೀಜೇಶ್ ರಂತಹ ಆಟಗಾರರು ರಾಹುಲ್ ಗಾಂಧಿ ಅವರಿಗಿಂತ ಮುಂದೆ ಆಸೀನರಾಗಿದ್ದರು.
ಶಿಷ್ಟಾಚಾರಗಳ ಪ್ರಕಾರ, ಲೋಕಸಭಾ ವಿಪಕ್ಷ ನಾಯಕರು ಸಂಪುಟ ಸಚಿವ ದರ್ಜೆ ಹೊಂದಿದ್ದು, ಅವರಿಗೆ ಯಾವಾಗಲೂ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಮುಂದಿನ ಸಾಲಿನಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಹಾಗೂ ಎಸ್.ಜೈಶಂಕರ್ ಆಸೀನರಾಗಿದ್ದರು.
ರಾಹುಲ್ ಗಾಂಧಿಗೆ ಕಲ್ಪಿಸಲಾಗಿದ್ದ ಆಸನ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಕಾವೇರಿದ್ದು, ಮುಂದಿನ ಸಾಲಿನ ಆಸನಗಳನ್ನು ಒಲಿಂಪಿಕ್ ಪದಕ ವಿಜೇತರಿಗೆ ಮೀಸಲಿರಿಸಿದ್ದರಿಂದ, ರಾಹುಲ್ ಗಾಂಧಿ ಹಿಂದಿನ ಸಾಲಿನ ಆಸನಕ್ಕೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ಸ್ಪಷ್ಟನೆ ನೀಡಿವೆ. ಸ್ವಾತಂತ್ರ್ಯ ದಿನಾಚರಣೆಯ ಆಯೋಜನೆ ಹಾಗೂ ಆಸನ ವ್ಯವಸ್ಥೆಗಳ ಏರ್ಪಾಡು ರಕ್ಷಣಾ ಸಚಿವಾಲಯದ ಜವಾಬ್ದಾರಿಯಾಗಿದೆ. ಶಿಷ್ಟಾಚಾರಗಳ ಪ್ರಕಾರ, ಲೋಕಸಭಾ ವಿಪಕ್ಷ ನಾಯಕನಿಗೆ ಮೊದಲ ಕೆಲವು ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಲೋಕಸಭಾ ವಿಪಕ್ಷ ನಾಯಕರಾಗಿದ್ದ ಸೋನಿಯಾ ಗಾಂಧಿ ಅವರಿಗೆ ಯಾವಾಗಲೂ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿತ್ತು.