ಮುಂಗಾರು ಅಬ್ಬರ: 12 ದಿನಗಳಲ್ಲಿ ಶೇಕಡ 30 ರಿಂದ 5ಕ್ಕೆ ಇಳಿದ ಮಳೆ ಕೊರತೆ
ಹೊಸದಿಲ್ಲಿ: ಎಲ್ ನಿನೊ ವರ್ಷದಲ್ಲಿ ವಿಳಂಬ ಹಾಗೂ ದುರ್ಬಲವಾಗಿ ಆರಂಭವಾದ ಮುಂಗಾರು, ಇದೀಗ ದೇಶಾದ್ಯಂತ ಅಬ್ಬರಿಸುತ್ತಿದ್ದು, ಕೇವಲ 12 ದಿನಗಳಲ್ಲಿ ಬಿದ್ದ ವ್ಯಾಪಕ ಮಳೆಯಿಂದಾಗಿ ಸರಾಸರಿ ಮಳೆ ಕೊರತೆ ಶೇಕಡ 30 ರಿಂದ ಶೇಕಡ 5ಕ್ಕೆ ಇಳಿದಿದೆ.
ಮಳೆ ಕೊರತೆಯಿಂದ ಆತಂಕಕ್ಕೀಡಾಗಿದ್ದ ಕೇಂದ್ರ ಹಾಗೂ ದಕ್ಷಿಣ ಭಾರತ ಪ್ರದೇಶ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಜೂನ್ 24ರಿಂದೀಚೆಗೆ ವ್ಯಾಪಕ ಮಳೆಯಾಗುತ್ತಿದೆ. ಜುಲೈ ಮೊದಲ ವಾರದಲ್ಲಿ ಮುಂಗಾರು ದುರ್ಬಲವಾಗಲಿದೆ ಎಂಬ ನಿರೀಕ್ಷೆಗೆ ತದ್ವಿರುದ್ಧವಾಗಿ, ಮುಂದಿನ ಕೆಲ ವಾರಗಳಲ್ಲಿ ಮುಂಗಾರು ಮಳೆ ಬಹುತೇಕ ಎಲ್ಲೆಡೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ.
ಆದರೆ ಮುಂಗಾರು ಪಯಣ ಇನ್ನೂ ಬಹುದೂರ ಸಾಗಬೇಕಿದೆ. ಗುರುವಾರದ ವರೆಗೆ ದೇಶಾದ್ಯಂತ 36 ಹವಾಮಾನ ಉಪವಿಭಾಗಗಳ ಪೈಕಿ 16ರಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಜೂನ್ 1ರಿಂದ ಆರಂಭವಾದ ಮುಂಗಾರು ಋತುವಿನಲ್ಲಿ ಈ ಕಡೆಗಳಲ್ಲಿ ಶೇಕಡ 29ರಷ್ಟು ಅಥವಾ ಅಧಿಕ ಕೊರತೆ ಇದೆ.
ಈ ಪೈಕಿ ಕೇರಳ, ಕರ್ನಾಟಕ, ಮಹಾರಾಷ್ಟ್ರ (ಕರಾವಳಿ ಪ್ರದೇಶ ಹೊರತುಪಡಿಸಿ), ತೆಲಂಗಾಂಣ, ಛತ್ತೀಸ್ಗಢ, ಒಡಿಶಾ, ಜಾರ್ಖಂಡ್, ಬಿಹಾರ ಹಾಗೂ ಬಂಗಾಳದ ಬಯಲು ಪ್ರದೇಶಗಳು ಸೇರಿವೆ. ಆದಾಗ್ಯೂ ಈ ಉಪವಿಭಾಗಗಳಲ್ಲಿ ಕಳೆದ ಎರಡು ವಾರಗಳಿಂದ ಮಳೆ ಕೊರತೆ ಇದ್ದರೂ, ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
"ಪ್ರಸ್ತುತ ಕಂಡುಬರುವ ಸೂಚನೆಯಂತೆ ಜುಲೈನಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಅಧಿಕ ಇರಲಿದೆ (ಶೇಕಡ 94 ರಿಂದ 106), ಮುಂದಿನ ಎರಡು ವಾರಗಳ ವರೆಗೆ ಸಕ್ರಿಯ ಮುಂಗಾರು ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮಹೋಪಾತ್ರ ಹೇಳಿದ್ದಾರೆ.