ರಾಜಸ್ಥಾನ | ವಯರ್ ಕದ್ದ ಆರೋಪ ; ದಲಿತ ಬಾಲಕನ ವಿವಸ್ತ್ರಗೊಳಿಸಿ ಬಲವಂತವಾಗಿ ನೃತ್ಯ ಮಾಡಿಸಿದರು!

Update: 2024-09-14 15:52 GMT

   ಸಾಂದರ್ಭಿಕ ಚಿತ್ರ

ಜೈಪುರ : ಕಾರ್ಯಕ್ರಮವೊಂದರಲ್ಲಿ ವಯರ್ ಕದ್ದ ಆರೋಪದಲ್ಲಿ 12 ವರ್ಷದ ದಲಿತ ಬಾಲಕನೋರ್ವನನ್ನು ವಿವಸ್ತ್ರಗೊಳಿಸಿ, ಬಲವಂತವಾಗಿ ನೃತ್ಯಮಾಡಿಸಿ ವೀಡಿಯೊ ಚಿತ್ರೀಕರಿಸಿದ ಘಟನೆ ಕೋಟಾದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊವೊಂದರಲ್ಲಿ ಬಾಲಕನೋರ್ವ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವುದು ಹಾಗೂ ನಾಲ್ಕರಿಂದ ಐದು ಮಂದಿ ಸುತ್ತಲೂ ಕುಳಿತುಕೊಂಡಿರುವುದು ಕಂಡು ಬಂದಿದೆ. ಅಲ್ಲಿದ್ದವರು ಬಾಲಕನಿಗೆ ನಗುತ್ತಾ ನೃತ್ಯ ಮಾಡುವಂತೆ ಬಲವಂತಪಡಿಸುತ್ತಿರುವುದು ದಾಖಲಾಗಿದೆ.

ಪೊಲೀಸರಿಗೆ ವೀಡಿಯೊ ದೊರಕಿದ ಹಾಗೂ ಸಂತ್ರಸ್ತ ಬಾಲಕನನ್ನು ಪತ್ತೆ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಅನಂತರ ಅವರು ದೂರು ದಾಖಲಿಸುವಂತೆ ಬಾಲಕನ ಕುಟುಂಬಕ್ಕೆ ಸೂಚಿಸಿದ್ದಾರೆ. ಬಾಲಕನ ತಂದೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಲಕ ಜಿಎಡಿ ಸರ್ಕಲ್‌ನಲ್ಲಿ ಶುಕ್ರವಾರ ರಾತ್ರಿ ಆಯೋಜಿಸಲಾಗಿದ್ದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ. ಮುಂಜಾನೆ ಸುಮಾರು 1ರಿಂದ 4 ಗಂಟೆಗಳ ನಡುವೆ ನಾಲ್ಕೈದು ಮಂದಿ ಆತನನ್ನು ಅಡ್ಡಗಟ್ಟಿದ್ದಾರೆ ಹಾಗೂ ವಯರ್ ಕದ್ದಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅವರು ಬಾಲಕನನ್ನು ವಿವಸ್ತ್ರಗೊಳಿಸಿದ್ದಾರೆ ಹಾಗೂ ಕುಣಿಯುವಂತೆ ಬಲವಂತಪಡಿಸಿದ್ದಾರೆ. ಬಾಲಕ ಕುಣಿಯುವುದನ್ನು ವೀಡಿಯೊ ರೆಕಾರ್ಡ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಹಾಗೂ ಪೊಕ್ಸೊ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತಂದೆ ಹಾಗೂ ಮಗ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಕ್ಷಿತಿಜ್ ಗುರ್ಜರ್ ಆಲಿಯಾಸ್ ಬಿಟ್ಟು(24), ಆಶಿಸ್ ಉಪಾಧ್ಯಾಯ ಆಲಿಯಾಸ್ ವಿಕ್ಕು (52), ಅವರ ಪುತ್ರ ಯಯಾತಿ ಉಪಾಧ್ಯಾಯ ಆಲಿಯಸ್ ಗುಂಗುನ್ (24), ಗೌರವ್ ಸೋನಿ (21), ಸಂದೀಪ್ ಸಿಂಗ್ ಆಲಿಯಾಸ್ ರಾಹುಲ್ ಬನ್ನಾಶಾ (30) ಹಾಗೂ ಸುಮಿತ್ ಕುಮಾರ್ ಸೈನ್ (25) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಆರು ಮಂದಿ ಆರೋಪಿಗಳು ಸಂಗೀತ ಕಂಪೆನಿಗೆ ಸೇರಿದವರು. ತಮ್ಮ ಸಂಗೀತೋಪಕರಣಗಳಿಂದ ಬಾಲಕ ವಯರ್ ಕದ್ದಿದ್ದಾನೆ ಎಂದು ಅವರು ಶಂಕಿಸಿದ್ದರು ಎಂದು ಡಿಎಸ್‌ಪಿ ಮನೀಷ್ ಶರ್ಮಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News